ಕೋವಿಡ್​ ಲಸಿಕೆ ಕಂಪನಿಗೆ ನೋಟಿಸ್​ ನೀಡಿದ ಔಷಧಮಹಾನಿಯಂತ್ರಕರು; ನಿರೀಕ್ಷೆ ಬೆನ್ನಲ್ಲೇ ಆತಂಕ

Serum institute of India
Published on

ನವದೆಹಲಿ: ಭಾರತದಲ್ಲಿ ಆಕ್ಸ್​ಫರ್ಡ್​ ವಿವಿಯ ಕರೊನಾ ಲಸಿಕೆ ಉತ್ಪಾದನೆಗೆ ಪರವಾನಗಿ ಪಡೆದು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿರುವ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾಗೆ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ನೋಟಿಸ್​ ನೀಡಿದೆ.

ಬ್ರಿಟನ್​ನಲ್ಲಿ ಈ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಈ ವೇಳೆ ಲಸಿಕೆ ಪಡೆದ ವ್ಯಕ್ತಿಯೊಬ್ಬರಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಕಾರಣ ನಾಲ್ಕು ದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಈ ವಿಷಯವನ್ನು ತಮ್ಮ ಗಮನಕ್ಕೇಕೆ ತಂದಿಲ್ಲ ಹಾಗೂ ಕ್ಲಿನಿಕಲ್​ ಟ್ರಯಲ್​ ಏಕೆ ನಿಲ್ಲಿಸಿಲ್ಲ ಎಂದು ನೋಟಿಸ್​ನಲ್ಲಿ ಕೇಳಲಾಗಿದೆ.

ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಈ ಪರೀಕ್ಷೆಯನ್ನೇಕೆ ಮುಂದುವರಿಸುತ್ತಿದೆ? ಕ್ಲಿನಿಕಲ್​ ಟ್ರಯಲ್​ ವೇಳೆ ಉಂಟಾದ ಪರಿಣಾಮಗಳ ಬಗ್ಗೆ ವಿಸ್ತೃತ ವರದಿಯನ್ನೇಕೆ ನೀಡಿಲ್ಲ ಎಂದು ನೋಟಿಸ್​ನಲ್ಲಿ ಪ್ರಶ್ನಿಸಲಾಗಿದೆ. ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್​ ಎಂದು ಕರೆಯಲಾಗುತ್ತಿದೆ. ಜತೆಗೆ ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಮೈಸೂರು ಸೇರಿ 17ಕ್ಕೂ ಅಧಿಕ ಕಡೆಗಳಲ್ಲಿ 1,600ಕ್ಕೂ ಅಧಿಕ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತಿದೆ.

ನಮಗೆ ಈವರೆಗೂ ಟ್ರಯಲ್​ ನಿಲ್ಲಿಸುವಂತೆ ಆದೇಶಗಳು ಬಂದಿಲ್ಲ. ಔಷಧ ಮಹಾನಿಯಂತ್ರಕರ ಸೂಚನೆಗಳನ್ನು ಪಾಲನೆ ಮಾಡಲಾಗುತ್ತದೆ.ಒಂದು ವೇಳೆ ಸುರಕ್ಷತೆ ಬಗ್ಗೆ ಅವರಿಗೆ ಆತಂಕಗಳಿದ್ದರೆ ನಿವಾರಿಸಲಾಗುವುದು ಜತೆಗೆ, ನಿಗದಿತ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ಸಿರಂ ಇನ್​ಸ್ಟಿಟ್ಯೂಟ್​ ಮಾಹಿತಿ ನೀಡಿದೆ.

ಕೋವಿಶೀಲ್ಡ್​ ಲಸಿಕೆ ವರ್ಷಾಂತ್ಯಕ್ಕೆ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿತ್ತು ಜತೆಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 225 ರೂ.ಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಈಗ ಕೊಂಚ ಆತಂಕ ಮನೆ ಮಾಡಿರುವುದಂತೂ ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net