

ನವದೆಹಲಿ: ಲಡಾಖ್ ಭಾಗದಲ್ಲಿ ಚೀನಾ ಅತಿಕ್ರಮಣ ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿ ಆಫ್ಘನ್ನಲ್ಲಿರುವ ಭಾರತದ ರಾಯಭಾರ ಕಚೇರಿಯ ಮೇಲೆ ಐಇಡಿ ದಾಳಿ ನಡೆಸುವುದಕ್ಕೆ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ ಏಜೆನ್ಸಿ (ಐಎಸ್ಐ) ಸಂಚು ರೂಪಿಸಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.
ಪಾಕ್ ಪ್ರಾಯೋಜಿತ ಉಗ್ರ ಸಂಘಟನೆ ಲಷ್ಕರ್ ಏ ತೊಯ್ಬಾ (ಎಲ್ಇಟಿ) ಈ ದಾಳಿಯನ್ನು ನಡೆಸುವ ಸಾಧ್ಯತೆ ಇದೆ. ಜಲಾಲಾಬಾದ್ನಲ್ಲಿರುವ ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಆಗಿದ್ದು, ವಾಹನದಲ್ಲಿ ಐಇಡಿ ಸ್ಫೋಟಕ ತುಂಬಿ ದಾಳಿ ನಡೆಸಬಹುದು. ಈಗಾಗಲೇ ನಾಲ್ವರು ಆತ್ಮಹತ್ಯಾ ಬಾಂಬರ್ಗಳು ಕುನಾರ್ ಪ್ರಾಂತ್ಯಕ್ಕೆ ತೆರಳಿದ್ದಾರೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಮೂಲಗಳು ರವಾನಿಸಿವೆ.
ಆಫ್ಘನ್ನಲ್ಲಿರುವ ಭಾರತದ ಆಸ್ತಿಪಾಸ್ತಿಗಳಿಗೆ ಸಾಕಷ್ಟು ಬೆದರಿಕೆ ಇದೆ. ಆಫ್ಘನ್ನಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವ ಕಾರಣ ಪಾಕಿಸ್ತಾನಕ್ಕೆ ಅಭದ್ರತೆ ಕಾಡತೊಡಗಿದೆ. ಹೀಗಾಗಿ ಅದು ಛಾಯಾ ಸಮರಕ್ಕೆ ಮುಂದಾಗಿದ್ದು, ಪ್ರಾಯೋಜಿತ ಉಗ್ರರನ್ನು ಕಣಕ್ಕೆ ಇಳಿಸಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿಯೆನ್ಸ್ (ಐಎಸ್ಕೆಪಿ)ಯನ್ನು ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನ ಮುತುವರ್ಜಿವಹಿಸಿದ್ದು, ಕಾಬೂಲ್ನಲ್ಲಿರುವ ಎತ್ನಿಕ್ ಮೈನಾರಿಟಿ ಸಮುದಾಯಗಳ ಮೇಲೆ ದಾಳಿ ನಡೆಸುತ್ತಿದೆ. (ಏಜೆನ್ಸೀಸ್)