More

    ಕ್ರಿಪ್ಟೋ ಕರೆನ್ಸಿಯಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪೆಡ್ಲರ್​ ಅಹಮದ್​ನ ವಹಿವಾಟು

    ಬೆಂಗಳೂರು: ಚಂದನವನಕ್ಕೆ ಡ್ರಗ್ಸ್ ನಂಟಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಎನ್​ಸಿಬಿ ಅಧಿಕಾರಿಗಳು ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯಲ್ಲಿ ಎಫ್. ಅಹಮದ್ ಎಂಬ ಡ್ರಗ್ಸ್ ಪೆಡ್ಲರ್​ನನ್ನು ಬಂಧಿಸಿದ್ದು, ವಿದೇಶದಿಂದ ಬರುತ್ತಿದ್ದ ಮಾದಕ ದ್ರವ್ಯ ಬೆಂಗಳೂರಿನ (ಪೇಜ್ 3) ಸೆಲೆಬ್ರಿಟಿಗಳಿಗೆ ಪೂರೈಕೆಯಾಗುತ್ತಿತ್ತು ಎಂಬ ಸ್ಪೋಟಕ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ.

    ಕ್ರಿಪ್ಟೋ ಕರೆನ್ಸಿಯಿಂದ ವ್ಯವಹಾರ

    ಡಾರ್ಕ್​ವೆಬ್ ಮೂಲಕ ವಿದೇಶದಲ್ಲಿರುವ ಡ್ರಗ್ ಮಾಫಿಯಾವನ್ನು ಸಂರ್ಪಸುತ್ತಿದ್ದ. ಇದರಿಂದ ಮಾದಕ ವಸ್ತುಗಳಿಗೆ ಆರ್ಡರ್ ಕೊಟ್ಟು ತರಿಸಿಕೊಳ್ಳುತ್ತಿದ್ದ. ತನ್ನೆಲ್ಲ ವ್ಯವಹಾರವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ನಡೆಸಿದ್ದಾನೆ. ಅಹಮದ್ ಸಾಗಣೆ ಮಾಡಿಕೊಂಡಿರುವ ಗಾಂಜಾ ದೇಶದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಇದಕ್ಕೆ ಮುಂಬೈನಲ್ಲಿಯೇ ಹೆಚ್ಚಿನ ಬೇಡಿಕೆ ಇದೆ. ಆನ್​ಲೈನ್ ಮೂಲಕ ಸಂರ್ಪಸುತ್ತಿದ್ದ ಖಾಯಂ ಗ್ರಾಹಕರಿಗೆ ಮಾತ್ರ ಪೂರೈಸುತ್ತಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.

    ಅಮೆರಿಕ ಮತ್ತು ಕೆನಡಾದಿಂದ ಕಳ್ಳಸಾಗಣೆಯಾಗಿದ್ದ 3.5 ಕೆ.ಜಿ. ಗಾಂಜಾವನ್ನು (ಕ್ಯುರೇಟೆಡ್ ಮರಿಜುವಾನಾ) ಜಪ್ತಿ ಮಾಡಲಾಗಿದೆ. ಈ ಗಾಂಜಾಗೆ ಮುಂಬೈನಲ್ಲಿ ಭಾರಿ ಪ್ರಮಾಣದಲ್ಲಿ ಬೇಡಿಕೆ ಇದೆ. ಖಚಿತ ಮಾಹಿತಿ ಮೇರೆಗೆ ವಿದೇಶಿ ಅಂಚೆ ಕಚೇರಿಗಳಲ್ಲಿ ಜಪ್ತಿ ಮಾಡಲಾಗಿದೆ. ಡಾರ್ಕ್​ನೆಟ್ ವೆಬ್​ಸೈಟ್ ಮೂಲಕ ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಖರೀದಿಸಲಾಗಿದೆ ಎಂದು ಎನ್​ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗೋವಾದ ರೆಸಾರ್ಟ್​ವೊಂದರಲ್ಲಿ ಅಹಮದ್ ಕಾರು ಚಾಲಕನಾಗಿದ್ದಾನೆ. ಈತ ಬೆಂಗಳೂರಿನಲ್ಲಿರುವ ಡ್ರಗ್ ಪೆಡ್ಲರ್​ಗೆ ಮಾದಕ ದ್ರವ್ಯ ಪೂರೈಸುತ್ತಿದ್ದ. ಅಹಮದ್​ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಪೆಡ್ಲರ್​ಗೆ ಬೆಂಗಳೂರಿನಲ್ಲಿರುವ ಹಲವು ಸೆಲೆಬ್ರೆಟಿಗಳ ಸಂಪರ್ಕವಿರುವುದು ಗೊತ್ತಾಗಿದೆ. ಆತ ಅವರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂಬ ವಿಚಾರ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts