More

    ವೈಜ್ಞಾನಿಕ ಚಿಂತನೆ ಎಲ್ಲರಿಗೂ ತಲುಪಲಿ: ನಳಂದ ಬುದ್ಧ ವಿಹಾರದ ಮುಖ್ಯಸ್ಥ ಬೋಧಿರತ್ನ ಬಂತೇಜಿ ಸಲಹೆ

    ಮಂಡ್ಯ: ಬೌದ್ಧ ಧಮ್ಮದ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆ ಹಾಗೂ ಮನಗಳಿಗೆ ತಲುಪಬೇಕಿದೆ ಎಂದು ತಿ.ನರಸೀಪುರ ನಳಂದ ಬುದ್ಧ ವಿಹಾರದ ಮುಖ್ಯಸ್ಥ ಬೋಧಿರತ್ನ ಬಂತೇಜಿ ಹೇಳಿದರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಇಂಗಳೇ ಫೌಂಡೇಶನ್, ಎವಿಎಸ್‌ಎಸ್ ಮಂಡ್ಯ ತಾಲೂಕು ಶಾಖೆ ಹಾಗೂ ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 2568ನೇ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿದ್ಯಾವಂತ ಸಮುದಾಯ ಮೌಢ್ಯತೆಯಿಂದ ದೂರ ಉಳಿಯಬೇಕು. ಅಂತೆಯೇ ವೈಜ್ಞಾನಿಕ ಸಂದೇಶ ಸಾರಿದ ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ- ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
    ಬುದ್ಧ ಗುರು ಬೋಧಿಸಿದ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳಿಂದ ನೆಮ್ಮದಿ ಲಭ್ಯವಾಗುತ್ತದೆ. ದುಡಿಯದೆ ದೇವರಿಂದ ಬೇಡಿಕೊಂಡರೆ ಫಲ ಲಭಿಸದು. ಜತೆಗೆ ಆರ್ಥಿಕ ಬೆಳೆವಣಿಗೆ ಸಾಧ್ಯವಾಗದು. ಜಗತ್ತಿನಲ್ಲಿ ಭಗವಾನ್ ಬುದ್ಧ ಮತ್ತು ಭೋದಿಸತ್ವ ಅಂಬೇಡ್ಕರ್ ಅವರಿಗೆ ಅನುಯಾಯಿಗಳಾಗಿ, ಅವರಂತೆ ಬದುಕಲು, ಸಾಧಿಸಲು ಪ್ರಯತ್ನಿಸಿ ಆಗ ಪ್ರತಿಫಲ ದೊರೆಯುತ್ತದೆ. ವಿಶ್ವದಲ್ಲಿ ಬುದ್ಧ ಪೂರ್ಣಿಮೆ ಆಚರಿಸುತ್ತಾರೆ. ಅದರಂತೆ ಇಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮಹಿಳೆಯರು ಹಾಗೂ ಪುರುಷರು ಸಮವಸ್ತ್ರ ಧರಿಸಿ ಮನಸ್ಸನ್ನು ಶಾಂತ ರೀತಿಯಲ್ಲಿ ಇರಲು ಮನಪರಿವರ್ತನೆ ಅತ್ಯಗತ್ಯ. ಭಗವಾನ್ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಂದೇಶ, ತತ್ವ, ಚಿಂತನೆ, ಆದರ್ಶಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಎಲ್ಲಿ ನಗು, ಶಾಂತಿ ಇರುತ್ತದೆ ಅಲ್ಲಿ ಬುದ್ಧ ಇದ್ದಾರೆ ಎಂದು ತಿಳಿಸಿದರು.
    ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಮಾತನಾಡಿ, ಬುದ್ಧನನ್ನು ಒಪ್ಪಿಕೊಳ್ಳುವಂತಹ ಮನೋಭಾವ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇದು ಹೆಮ್ಮೆ ಪಡುವಂತಹ ವಿಷಯವಾಗಿದೆ. ಬುದ್ಧ ಪೂರ್ಣಿಮೆಯ ಕಾರ್ಯಕ್ರಮವನ್ನು ಇಡೀ ದೇಶಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹಿಂದುವಾಗಿ ಹುಟ್ಟಿ ಹಿಂದುವಾಗಿ ಸಾಯಲಾರೆನು ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಹಿಂದು ಧರ್ಮದಲ್ಲಿ ಇದ್ದ ಅಮಾನವೀಯ ನಡವಳಿಕೆ ಹಾಗೂ ಹಲವು ದೋಷಗಳಿಂದಾಗಿ ಬೇಸರಗೊಂಡು ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಪಾಲನೆ ಮಾಡಿ ಮತ್ತಷ್ಟು ಶಕ್ತಿಯನ್ನು ತಂದುಕೊಟ್ಟರು ಎಂದು ಸ್ಮರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲ ಎಂ.ಬಿ.ಹರಿಪ್ರಸಾದ್ ಮಾತನಾಡಿ, ಬುದ್ಧ ಎಂದರೆ ಜ್ಞಾನದ ಪ್ರತೀಕ. ಅಂಬೇಡ್ಕರ್ ಎಂದರೆ ಸಾಮರ್ಥ್ಯ ಸ್ಫೂರ್ತಿ, ಜ್ಞಾನ ಮತ್ತು ಸಾಮರ್ಥ್ಯ ಸಾಧನೆಗೆ ರಹದಾರಿ. ಮುಂದಿನ ದಿನಗಳಲ್ಲಿ ಬುದ್ದರ ಧಮ್ಮ ಸಂದೇಶವನ್ನು ಮನೆ ಮನೆಗಳಿಗೆ, ಊರುಕೇರಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಡಿಸೆಂಬರ್ ತಿಂಗಳಲ್ಲಿ ಬುದ್ದರ ವಿಚಾರ ಸಂಕಿರಣಗಳ ಕುರಿತ 3 ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದು ತಿಳಿಸಿದರು.
    ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್, ಎವಿಎಸೆಸ್ ಸಂಸ್ಥೆ ಅಧ್ಯಕ್ಷ ರಾಮಣ್ಣ, ನಿವೃತ್ತ ಇಂಜಿನಿಯರ್ ಚಂದ್ರಹಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಆಟೋ ಗುರುಶಂಕರ್ ಚಂದಗಾಲು, ಆಟೋ ಜಯಶಂಕರ್ ಹೊಳಲು, ರಾಜೇಶ್, ಮುರುಗನ್, ಕುಮಾರ್, ವಜ್ರಮುನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts