

ನವದೆಹಲಿ: ಈ ದಿನ ಭಾರತದ ಎಲ್ಲಾ ಪ್ರಜೆಗಳಿಗೂ ಸಂತಸ ತರುವ ದಿನವಾಗಿದೆ. ಇಂದು ಭಾರತೀಯ ವನ್ಯಜೀವಿ ತಜ್ಞೆ ಡಾ| ಪೂರ್ಣಿಮಾ ದೇವಿ ಬರ್ಮನ್ ಈ ವರ್ಷದ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರಕ್ಕೆ ಸಂಬಂಧಿಸಿದ ಗೌರವವಾಗಿದೆ. ಪರಿಸರದ ಅವನತಿಯನ್ನು ತಡೆಯಲು ಮತ್ತು ಹೊಸ ಇಕೋಸಿಸ್ಟಂ ತಯಾರಿಸಿದಕ್ಕಾಗಿ ಬರ್ಈಮನ್ರಿಗೆ ಈ ಪ್ರಶಸ್ತಿ ನೀಡಲಾಗಿದೆ.
ವನ್ಯಜೀವಿ ತಜ್ಞೆ ಡಾ| ಬರ್ಮನ್ "ಹರ್ಗಿಲಾ ಆರ್ಮಿ" ಎನ್ನುವ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಮಹಿಳಾ ಸಂಘಟನೆಯಾಗಿದ್ದು ಪರಿಸರ ಸಂರಕ್ಷಣೆಯ ಕೆಲಸವನ್ನು ಮಾಡುತ್ತದೆ. ಈ ಸಂಘಟನೆ ಗ್ರೇಟರ್ ಅಡ್ಜಟಂಟ್ ಕೊಕ್ಕರೆಯನ್ನು ಅಳಿವಿನಿಂದ ರಕ್ಷಿಸಲು ಕೆಲಸ ಮಾಡಿದೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುವ ಈ ಸಂಘಟನೆ ಪಕ್ಷಿಗಳ ಬೇರೆ ಬೇರೆ ಜಾತಿಳಗನ್ನು ಒಳಗೊಂಡ ಮತ್ತು ಹಕ್ಕಿಯ ಲಕ್ಷಣಗಳಿರುವ ಬಟ್ಟೆ ತಯಾರಿಸಿ ಮಾರಾಟ ಮಾಡುತ್ತಾರೆ.
ಡಾ| ಬರ್ಮನ್ರನ್ನು ವಿಶ್ವಸಂಸ್ಥೆ ತನ್ನ ಪರಿಸರ ಯೋಜನೆಯ (UNEP) 2022 ರ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ವಾಣಿಜ್ಯೋದ್ಯಮ ವಿಭಾಗದಲ್ಲಿ ಗೌರವಿಸಿದೆ. ಪೂರ್ಣಿಮಾ ಬರ್ಮನ್ ಅಸ್ಸಾಂನಲ್ಲಿ ಅಳಿವಿನಂಚಿನಲ್ಲಿರುವ ಕೊಕ್ಕರೆಯನ್ನು ರಕ್ಷಿಸಲು ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡಿದ್ದಾರೆ.
UNEP ತನ್ನ ವೆಬ್ಸೈಟಲ್ಲಿ 'ತನ್ನ ಐದನೇ ವಯಸ್ಸಿನಲ್ಲಿ ಅಸ್ಸಾಂನ ಬ್ರಹ್ಮಪುತ್ರ ನದಿಯ ದಡದಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸಲು ತೆರಳಿದ್ದರು. ತಮ್ಮ ತಂದೆತಾಯಿಗಳು ಮತ್ತು ಒಡಹುಟ್ಟಿದವರಿಂದ ಬೇರ್ಪಟ್ಟ ಬರ್ಮನ್ ಅಲ್ಲಿ ಕಾಲ ಕಳೆಯಲು ಅಸಮರ್ಥರಾದರು. ಅವರ ಗಮನವನ್ನು ಬೇರೆಡೆಗೆ ಸೆಳೆಯಲು, ಬರ್ಮನ್ರ ಅಜ್ಜಿ ಮತ್ತು ಒರ್ವ ರೈತ, ಅವರನ್ನು ಹತ್ತಿರದ ಗದ್ದೆಗಳು ಮತ್ತು ಜೌಗು ಪ್ರದೇಶಗಳಿಗೆ ಕರೆದೊಯ್ದು ಅಲ್ಲಿನ ಪಕ್ಷಿಗಳ ಬಗ್ಗೆ ಕಲಿಸಲು ಪ್ರಾರಂಭಿಸಿದರು' ಎಂದು ಡಾ| ಬರ್ಮನ್ ಬಗ್ಗೆ ಮಾಹಿತಿ ನೀಡಿದೆ.
ಇಂದು "ಹರ್ಗಿಲಾ ಆರ್ಮಿ" 10,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿದೆ. ಅವರು ಪಕ್ಷಿಗಳು ಗೂಡುಕಟ್ಟುವ ಸ್ಥಳಗಳನ್ನು ರಕ್ಷಿಸುತ್ತಾರೆ. ತಮ್ಮ ಗೂಡುಗಳಿಂದ ಬಿದ್ದು ಗಾಯಗೊಂಡ ಕೊಕ್ಕರೆಗಳ ಪುನರ್ವಸತಿ ಮಾಡುತ್ತಾರೆ. ಇವರು ನವಜಾತ ಮರಿಗಳ ಆಗಮನವನ್ನು ಆಚರಿಸಲು "ಬೇಬಿ ಶವರ್" ಕಾರ್ಯಕ್ರಮವನ್ನೂ ಏರ್ಪಡಿಸುತ್ತಾರೆ. ಇವರಿಂದಾಗಿ ಈಗ ದೊಡ್ಡ ಅಡ್ಜಟಂಟ್ ಕೊಕ್ಕರೆ ನಿಯಮಿತವಾಗಿ ಜಾನಪದ ಹಾಡುಗಳು, ಕವಿತೆಗಳು, ಉತ್ಸವಗಳು ಮತ್ತು ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ. (ಏಜೆನ್ಸೀಸ್)