

ನವದೆಹಲಿ: ಇಂಡಿಯನ್ ಏರ್ಲೈನ್ಸ್ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಿಇಒ ಆಗಿ ನೇಮಿಸಿದೆ. ಹರ್ಪ್ರೀತ್ ಎ ಡಿ ಸಿಂಗ್ ಎಂಬುವರನ್ನು ಕೇಂದ್ರ ಸರ್ಕಾರವು ಏರ್ ಇಂಡಿಯಾ (ಎಐ)ದ ರಿಜನಲ್ ಸಬ್ಸಿಡರಿ ಅಲಯನ್ಸ್ ಏರ್ನ ಸಿಇಒ ಆಗಿ ನೇಮಿಸಿದೆ.
ಏರ್ ಇಂಡಿಯಾ ಸಿಎಂಡಿ ರಾಜೀವ್ ಬನ್ಸಾಲ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದು, ಹರ್ಪ್ರೀತ್ ಅವರು ಮುಂದಿನ ಆದೇಶದವರೆಗೆ ಅಲಯನ್ಸ್ ಏರ್ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಹರ್ಪ್ರೀತ್, ಪ್ರಸ್ತುತ ಏರ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕಿ (ವಿಮಾನ ಸುರಕ್ಷತೆ) ಆಗಿದ್ದಾರೆ. ಸಿಇಒ ಆಗಿ ಬಡ್ತಿ ಪಡೆದ ಬಳಿಕ ಹರ್ಪ್ರೀತ್ ಸ್ಥಾನಕ್ಕೆ ಪ್ರಸ್ತುತ ಚಾಲನೆಯಲ್ಲಿರುವ ಬೋಯಿಂಗ್ 787 ಡ್ರೀಮ್ ಲೈನರ್ನ ಹಿರಿಯ ಕಮ್ಯಾಂಡರ್ ಕ್ಯಾಪ್ಟನ್ ನಿವೇದಿತಾ ಭಸಿನ್ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿದೆ.
ಹರ್ಪ್ರೀತ್ ಸಿಂಗ್ ಯಾರು?
ಹರ್ಪ್ರೀತ್ ಅವರು 1988ರಲ್ಲಿ ಏರ್ ಇಂಡಿಯಾಗೆ ಆಯ್ಕೆಯಾದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಆದರೂ ಅನಾರೋಗ್ಯ ಕಾರಣದಿಂದಾಗಿ ಅವರು ಹಾರಾಟ ನಡೆಸಲು ಆಗಲಿಲ್ಲ. ಹೀಗಾಗಿ ವಿಮಾನ ಸುರಕ್ಷತೆಯ ವಿಭಾಗದಲ್ಲಿ ಸಕ್ರೀಯರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಅನೇಕರು ಉತ್ತಮ ಪೈಲಟ್ಗಳಾಗಿ ರೂಪುಗೊಂಡಿದ್ದಾರೆ. (ಏಜೆನ್ಸೀಸ್)