ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್‌ಗೇರಿದ ಭಾರತದ ಮಹಿಳಾ ಹಾಕಿ ತಂಡ

hoc web
Published on

ಟೋಕಿಯೊ: ವಂದನಾ ಕಟಾರಿಯಾ (4, 17, 49ನೇ ನಿಮಿಷ) ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದರು. ಈ ಐತಿಹಾಸಿಕ ಸಾಧನೆಯ ನೆರವಿನಿಂದ ಭಾರತದ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್ ಹಂತಕ್ಕೇರಿದೆ.

ರಾಣಿ ರಾಂಪಾಲ್ ಪಡೆ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 4-3ರಿಂದ ಸೋಲಿಸಿತು. 1980ರಲ್ಲಿ ಕೊನೆಯದಾಗಿ ಸೆಮೀಸ್‌ಗೇರಿದ್ದ ಮಹಿಳಾ ಹಾಕಿ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರ 2016ರ ಒಲಿಂಪಿಕ್ಸ್‌ನಲ್ಲಷ್ಟೇ ಆಡಿದ್ದ ಮಹಿಳಾ ಹಾಕಿ ತಂಡ ನಾಕೌಟ್‌ಗೇರಲು ಯಶಸ್ವಿಯಾಗಿರಲಿಲ್ಲ.

ನಾಕೌಟ್ ಆಸೆ ಜೀವಂತವಿರಿಸಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಯುವ ಆಟಗಾರ್ತಿ ನೇಹಾ ಗೋಯೆಲ್ (32ನೇ ನಿಮಿಷ) ಭಾರತಕ್ಕೆ ಮತ್ತೊಂದು ಗೋಲು ತಂದುಕೊಟ್ಟರು. ಮೊದಲ 3 ಪಂದ್ಯ ಸೋತಿದ್ದ ರಾಣಿ ರಾಂಪಾಲ್ ಪಡೆಗೆ ಇದು ಸತತ 2ನೇ ಗೆಲುವಾಗಿದೆ. ದಕ್ಷಿಣ ಆಫ್ರಿಕಾ ಪರ ಟರಿನ್ ಗ್ಲಾಸ್ಬಿ (15), ನಾಯಕಿ ಇರಿನ್ ಹಂಟರ್ (30) ಮತ್ತು ಮರಿಜೆನ್ ಮರಾಯಿಸ್ (39) ಗೋಲು ಬಾರಿಸಿದರು.

ಐರ್ಲೆಂಡ್ ತಂಡ ಬ್ರಿಟನ್ ವಿರುದ್ಧ ಸೋತ ವರದಾನದೊಂದಿಗೆ ಭಾರತದ ಮಹಿಳೆಯರು ಎ ಗುಂಪಿನಲ್ಲಿ 4ನೇ ಸ್ಥಾನ ಸಂಪಾದಿಸುವಲ್ಲಿ ಸಲರಾದರು. ಬಿ ಗುಂಪಿನ ಅಗ್ರಸ್ಥಾನಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಮವಾರ ಕ್ವಾರ್ಟರ್​ಫೈನಲ್‌ನಲ್ಲಿ ಸೆಣಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net