ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾರ್ಥಿವ್ ಪಟೇಲ್​ ವಿದಾಯ: ಆರ್​ಸಿಬಿ ಆಟಗಾರನ ಭಾವುಕ ಸಂದೇಶ!

Pruthvi
Published on

ನವದೆಹಲಿ: ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಪಾರ್ಥಿವ್ ಪಟೇಲ್​ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬುಧವಾರ ವಿದಾಯ ಘೋಷಿಸಿದ್ದಾರೆ. ಟ್ವೀಟ್​ ಮೂಲಕ ವಿದಾಯದ ನುಡಿಗಳನ್ನು ಆಡಿರುವ ಆರ್​ಸಿಬಿ ಆಟಗಾರ 18 ವರ್ಷದ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ಮುಂಚೆಯೇ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದ 35 ವರ್ಷದ ಪಟೇಲ್​, ಸೌರವ್​ ಗಂಗೂಲಿ ನಾಯಕತ್ವದಡಿಯಲ್ಲಿ 2002ರಲ್ಲಿ ಇಂಗ್ಲೆಂಡ್​ನ ನಾಟಿಂಗ್​ಹ್ಯಾಮ್​ನಲ್ಲಿ 17ನೇ ವಯಸ್ಸಿನಲ್ಲೇ ಮೊದಲ ಟೆಸ್ಟ್​ ಪಂದ್ಯವನ್ನು ಆಡಿದರು. ಅಲ್ಲಿಂದಾಚೆಗೆ ಅತಿ ಕಿರಿಯ ವಿಕೆಟ್​ ಕೀಪರ್​ ಎಂಬ ಕೀರ್ತಿಗೂ ಪಾರ್ಥಿವ್ ಪಟೇಲ್​ ಭಾಜನರಾದರು.

ಗುಜರಾತ್​ ಮೂಲದ ಆಟಗಾರರಾಗಿರುವ ಪಟೇಲ್​ 25 ಟೆಸ್ಟ್​, 38 ಏಕದಿನ ಮತ್ತು 2 ಟಿ20 ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 2018ರ ದಕ್ಷಿಣ ಆಫ್ರಿಕಾ ಪ್ರವಾಸವೇ ಪಟೇಲ್​ ಅವರು ತಂಡದ ಪರ ಆಡಿದ ಕೊನೆಯ ಪಂದ್ಯವಾಗಿದೆ.

ನಾನು ದಾದಾಗೆ ಋಣಿಯಾಗಿರುತ್ತೇನೆ

ಟ್ವೀಟ್​ ಮೂಲಕ ವಿದಾಯ ಘೋಷಿಸಿ ಮನದಾಳದ ಮಾತುಗಳನ್ನಾಡಿರುವ ಪಟೇಲ್​, ನಾನಿಂದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದೇನೆ. 18 ವರ್ಷದ ಕ್ರಿಕೆಟ್​ ಪ್ರಯಾಣಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ. ಈ ಪಯಣದಲ್ಲಿ ಜತೆಯಾದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. 17 ವರ್ಷದ ಹುಡುಗನೊಬ್ಬ ಟೀಮ್​ ಇಂಡಿಯಾ ಪರ ಆಡುವಾಗ ಬಿಸಿಸಿಐ ಉದಾರತೆ ತೋರಿತು. ನನ್ನ ವೃತ್ತಿ ಜೀವನದಲ್ಲಿ ನನ್ನ ಕೈಹಿಡಿದು ನಡೆಸಿದ ಎಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದು ಪಟೇಲ್​ ಹೇಳಿದ್ದಾರೆ.

ನನ್ನ ವೃತ್ತಿ ಜೀವನದ ಪಂದ್ಯಗಳಲ್ಲಿ ನಾಯಕರಾಗಿದ್ದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಅದರಲ್ಲೂ ವಿಶೇಷವಾಗಿ ನನ್ನ ಮೇಲೆ ತುಂಬಾ ನಂಬಿಕೆ ಇಟ್ಟ ದಾದಾ (ಸೌರವ್​ ಗಂಗೂಲಿ)ಗೆ ಯಾವಾಗಲೂ ಋಣಿಯಾಗಿರುತ್ತೇನೆ. ಈ ಪಯಣದಲ್ಲಿ ನನ್ನೊಂದಿಗೆ ಜತೆಯಾದ ನಾನು ಸ್ನೇಹಿತರೆಂದು ಕರೆಯುವ ಸಹ ಆಟಗಾರರು ಮತ್ತು ತುಂಬಾ ಸ್ಫೂರ್ತಿ ನೀಡಿದ ಎದುರಾಳಿ ತಂಡದ ಆಟಗಾರರಿಗೂ ನಾನು ಕೃತಜ್ಞರಾಗಿತ್ತೇನೆಂದು ಪಟೇಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net