

ಅಹಮದಾಬಾದ್: ತವರಿನ ಏಕದಿನ ವಿಶ್ವಕಪ್ ಉತ್ಸವದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಸೋಲುಣಿಸಿ ಗೆಲುವಿನ ಲಯದಲ್ಲಿರುವ ಆತಿಥೇಯ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೂ ಅಜೇಯ ಓಟ ವಿಸ್ತರಿಸಲು ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಭಾರತ-ಪಾಕ್ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. ಅತ್ತ ಪಾಕ್ ಕೂಡ ಸತತ 2 ಗೆಲುವಿನ ವಿಶ್ವಾಸದಲ್ಲಿರುವುದರಿಂದ ರೋಚಕ ಹಣಾಹಣಿ ನಿರೀಕ್ಷಿಸಲಾಗಿದ್ದು, ಟೀಮ್ ಇಂಡಿಯಾ ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಸತತ 8ನೇ ಗೆಲುವಿನ ತವಕದಲ್ಲಿದೆ.
22 ಯಾರ್ಡ್ ಪಿಚ್ ಮೇಲೆ ನಡೆಯುವ ಭಾರತ-ಪಾಕ್ ನಡುವಿನ ಈ ಕ್ರಿಕೆಟ್ ಯುದ್ಧ ಈಗಾಗಲೆ ವಿಶ್ವದ ಗಮನಸೆಳೆದಿದೆ. ನಿರೀಕ್ಷೆಗಳು ವ್ಯಾಪಕವಾಗಿ ಹರಡಿರುವ ನಡುವೆ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ತಂಡಕ್ಕೆ ಗೆಲುವು ಒಲಿಯಲಿದೆ. ಆತಿಥೇಯ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಎಲ್ಲ ಆಟಗಾರರು ಭರ್ಜರಿ ಫಾರ್ಮ್ನಲ್ಲಿರುವ, ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿರುವ ಕಾರಣ ಮತ್ತು ಇತ್ತೀಚೆಗೆ ಏಷ್ಯಾಕಪ್ನಲ್ಲೂ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಕಾರಣದಿಂದಾಗಿ ರೋಹಿತ್ ಶರ್ಮ ಬಳಗವೇ ಈ ಕಾದಾಟದ ಹಾಟ್ ಫೇವರಿಟ್ ತಂಡವೆನಿಸಿದೆ. ಬಾಬರ್ ಅಜಮ್ ಬಳಗದ ಆಟಗಾರರಿಗೆ ಭಾರತದಲ್ಲಿ ಹೈದರಾಬಾದ್ನಿಂದ ಹೊರಗೆ ಇದು ಮೊದಲ ಪಂದ್ಯವಾಗಿದ್ದು, ಭಾರತದ 11 ಆಟಗಾರರ ಜತೆಗೆ 1.32 ಲಕ್ಷ ಪ್ರೇಕ್ಷಕರ ಸವಾಲನ್ನೂ ಎದುರಿಸಬೇಕಾಗಿದೆ. ಮತ್ತೊಂದೆಡೆ ಭಾರತ ತಂಡಕ್ಕೂ, "ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕ್ ವಿರುದ್ಧ ಸೋಲಬೇಡಿ' ಎಂಬ ಕ್ರಿಕೆಟ್ ಪ್ರೇಮಿಗಳ ಮಾತು ಯಾವಾಗಲೂ ಹೆಚ್ಚುವರಿ ಒತ್ತಡವಾಗಿರುತ್ತದೆ.
ಪಾಕ್ ವೇಗಿಗಳಾದ ಶಹೀನ್ ಷಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತದ ಬ್ಯಾಟರ್ಗಳಿಗೆ ಸವಾಲೊಡ್ಡ ಬಲ್ಲವರಾದರೂ, ಉಪನಾಯಕ ಹಾಗೂ ಸ್ಪಿನ್ನರ್ ಶಾದಾಬ್ ಖಾನ್ ಮತ್ತು ವೇಗಿ ಹಸನ್ ಅಲಿ ಸದ್ಯ ಲಯದಲ್ಲಿರದೆ ಇರುವುದು ಭಾರತಕ್ಕೆ ಲಾಭ ತರಬಹುದು. ಸಮರ್ಥ 2ನೇ ಸ್ಪಿನ್ನರ್ ಇರದಿರುವುದು ಪಾಕ್ ತಂಡದ ಪ್ರಮುಖ ದೌರ್ಬಲ್ಯವಾಗಿದೆ. ಯುವವೇಗಿ ನಸೀಮ್ ಷಾ ಗಾಯದಿಂದಾಗಿ ಅಲಭ್ಯರಾಗಿರುವುದೂ ಪಾಕ್ ಹಿನ್ನಡೆಯಾಗಿದೆ. ಇನ್ನು ಪಾಕ್ ಪ್ರಮುಖ ಬ್ಯಾಟರ್ಗಳಾದ ಬಾಬರ್ ಅಜಮ್, ಮೊಹಮದ್ ರಿಜ್ವಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್ಗೆ ವೇಗಿ ಜಸ್ಪ್ರೀತ್ ಬುಮ್ರಾ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕಠಿಣ ಸವಾಲಾಗಲಿದ್ದಾರೆ. ಇತ್ತೀಚೆಗೆ ಏಷ್ಯಾಕಪ್ನಲ್ಲಿ ಕೊಲಂಬೊದಲ್ಲೂ ಪಾಕ್ ಬ್ಯಾಟರ್ಗಳು ಕುಲದೀಪ್ ಎದುರು ಚಡಪಡಿಸಿದ್ದರು.
ಗಿಲ್ ಬಗ್ಗೆ ಇನ್ನೂ ಗೊಂದಲ
ಡೆಂ ಜ್ವರದಿಂದ ಚೇತರಿಸಿಕೊಂಡಿರುವ ಯುವ ಆರಂಭಿಕ ಶುಭಮಾನ್ ಗಿಲ್ ಗುರುವಾರವೇ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಅವರು ಪಾಕ್ ಎದುರು ಆಡುವರೇ ಎಂಬುದು ಸ್ಪಷ್ಟವಾಗಿಲ್ಲ. ಗಿಲ್ ಪಂದ್ಯಕ್ಕೆ ಶೇ. 99 ಫಿಟ್ ಆಗಿದ್ದಾರೆ ಎಂದು ನಾಯಕ ರೋಹಿತ್ ಶರ್ಮ ಪಂದ್ಯಕ್ಕೆ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರೂ, ಆಡುವರೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಲ್ಲ. ಗಿಲ್ ಈಗಾಗಲೆ ಮೊದಲೆರಡು ಪಂದ್ಯ ತಪ್ಪಿಸಿಕೊಂಡಿದ್ದಾರೆ.
ಟೀಮ್ ನ್ಯೂಸ್:
ಭಾರತ: ಶುಭಮಾನ್ ಗಿಲ್ ಡೆಂಯಿಂದ ಚೇತರಿಸಿ ಅಭ್ಯಾಸ ಆರಂಭಿಸಿದ್ದರೂ, ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. 8ನೇ ಕ್ರಮಾಂಕಕ್ಕೆ ಶಾರ್ದೂಲ್ ಠಾಕೂರ್ಗೆ ಅಶ್ವಿನ್ ಪೈಪೋಟಿ ಒಡ್ಡುತ್ತಿದ್ದಾರೆ. ಇನ್ನು ಪಾಕ್ ವಿರುದ್ಧದ ಉತ್ತಮ ದಾಖಲೆ ಗಮನಿಸಿ ಅನುಭವಿ ವೇಗಿ ಮೊಹಮದ್ ಶಮಿ ಅವರನ್ನು ಸಿರಾಜ್ ಬದಲಿಗೆ ಆಡಿಸಿದರೂ ಅಚ್ಚರಿ ಇಲ್ಲ.
ಪಾಕಿಸ್ತಾನ: ಸತತ 2 ಗೆಲುವಿನ ನಡುವೆ ಪಾಕ್ ತಂಡದಲ್ಲಿನ ಕೆಲ ದೌರ್ಬಲ್ಯಗಳು ಬೆಳಕಿಗೆ ಬಂದಿದ್ದರೂ, ಭಾರತ ವಿರುದ್ಧ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯ ನಿರೀೆ ಇಲ್ಲ. 2 ಪಂದ್ಯಗಳಲ್ಲಿ 16 ಓವರ್ಗಳಲ್ಲಿ 100 ರನ್ ಬಿಟ್ಟುಕೊಟ್ಟಿದ್ದರೂ, ಶಾದಾಬ್ ಸ್ಥಾನ ತುಂಬಬಲ್ಲ ಬೇರೆ ಸ್ಪಿನ್ನರ್ ತಂಡದಲ್ಲಿಲ್ಲ. 3ನೇ ವೇಗಿ ಹಸನ್ ಅಲಿ ಕೂಡ ಇನ್ನೊಂದು ಅವಕಾಶ ಪಡೆಯಬಹುದು.
ಏಕದಿನ ಮುಖಾಮುಖಿ: 134
ಭಾರತ: 56
ಪಾಕಿಸ್ತಾನ: 73
ರದ್ದು: 5
ವಿಶ್ವಕಪ್ ಮುಖಾಮುಖಿ: 7
ಭಾರತ: 7
ಪಾಕಿಸ್ತಾನ: 0
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ
ಪಾಕ್ ಎದುರು ಅಜೇಯ ದಾಖಲೆ
ಭಾರತ ತಂಡ ಈ ಬಾರಿ 2011ರ ಸಾಧನೆ ಪುನರಾವರ್ತಿಸುವ ಮೂಲಕ 12 ವರ್ಷಗಳ ಬಳಿಕ 3ನೇ ಬಾರಿಗೆ ಏಕದಿನ ವಿಶ್ವಕಪ್ ಗೆಲುವು, 13 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಬೇಕಾದಷ್ಟೇ ಮಹತ್ವದ ಅಂಶವೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್ ಟೂರ್ನಿಯ ಅಜೇಯ ದಾಖಲೆ
ಕಾಯ್ದುಕೊಳ್ಳುವುದು. ಪಾಕ್ ವಿರುದ್ಧ ಏಕದಿನ ವಿಶ್ವಕಪ್ನಲ್ಲಿ ಈ ಮುನ್ನ ಆಡಿದ ಏಳು ಪಂದ್ಯಗಳಲ್ಲೂ (1992, 1996, 1999, 2003, 2011, 2015, 2019) ಗೆದ್ದ ಸಾಧನೆ ಭಾರತ ತಂಡದ್ದಾಗಿದೆ.
ಪಂದ್ಯಕ್ಕೆ ಮುನ್ನ ಸಂಗೀತ ಸುಧೆ!
ಮೋದಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಮುನ್ನ ಮಧ್ಯಾಹ್ನ 12.30ರಿಂದ ವಿಶೇಷ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಿವುಡ್ ಗಾಯಕರಾದ ಶಂಕರ್ ಮಹಾದೇವನ್, ಸುಖ್ವಿಂದರ್ ಸಿಂಗ್, ಅರ್ಜಿತ್ ಸಿಂಗ್ ಸಂಗೀತ ಸುಧೆ ಹರಿಸಲಿದ್ದಾರೆ.
11 ಸಾವಿರ ಭದ್ರತಾ ಸಿಬ್ಬಂದಿ
ಪಂದ್ಯಕ್ಕೆ ಗುಜರಾತ್ ಪೊಲೀಸ್, ಎನ್ಎಸ್ಜಿ, ಆರ್ಎಎ್, ಗೃಹರಕ್ಷಣಾ ಪಡೆ ಸಹಿತ ಕ್ರೀಡಾಂಗಣದ ಸುತ್ತ ವಿವಿಧ ಭದ್ರತಾ ಏಜೆನ್ಸಿಗಳಿಂದ ಒಟ್ಟು 11 ಸಾವಿರ ರಕ್ಷಣಾ ಸಿಬ್ಬಂದಿಯನ್ನು ಬಿಗಿಭದ್ರತೆಗಾಗಿ ನಿಯೋಜಿಸಲಾಗಿದೆ.
ಟಿಕೆಟ್ ಸೋಲ್ಡ್ಔಟ್
ವಿಶ್ವಕಪ್ ಪಂದ್ಯಗಳ ಟಿಕೆಟ್ ಸೋಲ್ಡ್ಔಟ್ ಎಂದು "ಬುಕ್ಮೈಶೋ' ಹೇಳುತ್ತ ಬಂದಿದ್ದರೂ, ಆತಿಥೇಯ ಭಾರತದ 2 ಪಂದ್ಯ ಸೇರಿದಂತೆ ಇದುವರೆಗೆ 11 ಪಂದ್ಯಗಳಿಗೂ ಕ್ರೀಡಾಂಗಣ ಕಿಕ್ಕಿರಿದು ತುಂಬಿದಂತೆ ಕಾಣಿಸಿಲ್ಲ. ಚೆನ್ನೈ, ನವದೆಹಲಿಯಲ್ಲಿ ನಡೆದ ಭಾರತದ ಪಂದ್ಯಗಳ ಕೆಲ ಟಿಕೆಟ್ಗಳನ್ನೂ ಕೊನೇಕ್ಷಣದಲ್ಲಿ ಮಾರಾಟಕ್ಕಿಟ್ಟು ಬಿಸಿಸಿಐ ಗೊಂದಲ ಎಬ್ಬಿಸಿತ್ತು. ಇದರಿಂದಾಗಿ ಪಂದ್ಯಗಳ ಸಮಯದಲ್ಲಿ ಕೆಲ ಸೀಟುಗಳು ಖಾಲಿಖಾಲಿಯಾಗಿಯೇ ಕಂಡಿದ್ದವು. ಆದರೆ ಭಾರತ&ಪಾಕ್ ಪಂದ್ಯದ ವೇಳೆ ಮೋದಿ ಸ್ಟೇಡಿಯಂನ 1.32 ಲಕ್ಷ ಸೀಟುಗಳೂ ತುಂಬುವ ನಿರೀೆ ಇದೆ. ಬಿಸಿಸಿಐ ಇತ್ತೀಚೆಗೆ ಕೊನೇ ಹಂತವಾಗಿ ಪಂದ್ಯದ 14 ಸಾವಿರ ಟಿಕೆಟ್ಗಳನ್ನು ಮಾರಾಟಕ್ಕಿಟ್ಟಿತ್ತು ಮತ್ತು ಅವೆಲ್ಲವೂ ಅರ್ಧ ಗಂಟೆಯಲ್ಲೇ ಖಾಲಿಯಾಗಿದ್ದವು. ಪಂದ್ಯದ ಟಿಕೆಟ್ಗಳು ಕಾಳಸಂತೆಯಲ್ಲಿ ಕನಿಷ್ಠ 25 ಸಾವಿರ ರೂ. ಮೊತ್ತಕ್ಕೆ ಮಾರಾಟವಾಗುತ್ತಿದ್ದರೆ, ಅಹಮದಾಬಾದ್ನಲ್ಲಿ ಹೋಟೆಲ್ ರೂಮ್ ಮತ್ತು ಅಲ್ಲಿಗೆ ತೆರಳುವ ವಿಮಾನ ಟಿಕೆಟ್ ಬೆಲೆಗಳೂ ಹಲವು ಪಟ್ಟು ಏರಿಕೆ ಕಂಡಿವೆ.
ವಿಶೇಷ ಮಹತ್ವಕ್ಕೆ ಆಕ್ರೋಶ
ಪಾಕ್ ವಿರುದ್ಧದ ಪಂದ್ಯ ನಮಗೆ ಇನ್ನೊಂದು ಪಂದ್ಯವಷ್ಟೇ ಎಂದು ಕ್ರಿಕೆಟಿಗರು ಹೇಳುತ್ತ ಬರುತ್ತಿದ್ದರೂ, ಬಿಸಿಸಿಐ ಮತ್ತು ಐಸಿಸಿ ಹಾಗೆ ಭಾವಿಸಿದಂತಿಲ್ಲ. ವಿಶ್ವಕಪ್ ಉದ್ಘಾಟನಾ ಸಮಾರಂಭವನ್ನೇ ರದ್ದುಗೊಳಿಸಿದ್ದ ಬಿಸಿಸಿಐ, ಇದೀಗ ಪಾಕ್ ವಿರುದ್ಧ ಪಂದ್ಯಕ್ಕೆ ಮುನ್ನ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಿರುವುದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಭಯೋತ್ಪಾದನೆಯನ್ನು ಪೋಷಿಸುವ ಪಾಕ್ ವಿರುದ್ಧದ ಪಂದ್ಯಕ್ಕೆ ಯಾಕೆ ವಿಶೇಷ ಮಹತ್ವ ನೀಡಲಾಗುತ್ತಿದೆ? ಅತಿಥಿ ದೇವೋಭವ ನಮ್ಮ ನಂಬಿಕೆ ಆಗಿದ್ದರೂ, ಅದು ಅತಿಯಾಗಬಾರದು. ಯೋಧರ ಬಲಿದಾನಗಳಿಗೆ ಅವಮಾನ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
ಮಳೆ ಸಾಧ್ಯತೆ ವಿರಳ
ಕಳೆದ ಏಷ್ಯಾಕಪ್ನಲ್ಲಿ ನಡೆದ ಭಾರತ&ಪಾಕ್ ನಡುವಿನ ಎರಡೂ ಪಂದ್ಯಗಳು ಮಳೆಯಿಂದ ಅಡಚಣೆ ಎದುರಿಸಿದ್ದವು. ಈ ಪೈಕಿ ಒಂದು ಪಂದ್ಯ ರದ್ದುಗೊಂಡಿದ್ದರೆ, ಇನ್ನೊಂದು ಪಂದ್ಯ ಮರುದಿನಕ್ಕೆ ವಿಸ್ತರಿಸಲ್ಪಟ್ಟಿತ್ತು. ವಿಶ್ವಕಪ್ನಲ್ಲೂ ಭಾರತ-ಪಾಕ್ ಪಂದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮಳೆ ಮುನ್ಸೂಚನೆ ಇದ್ದರೂ, ಮಳೆಯಿಂದಾಗಿ ಪಂದ್ಯ ತೊಂದರೆ ಎದುರಿಸುವ ಸಾಧ್ಯತೆ (ಶೇ. 14) ವಿರಳ ಎನ್ನಲಾಗುತ್ತಿದೆ. ಆದರೆ, ಮಳೆ ಕಾಡಿದರೆ ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ವಿಶ್ವಕಪ್ನಲ್ಲಿ ನಾಕೌಟ್ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿದೆ.
ಪಿಚ್ ರಿಪೋರ್ಟ್
ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಉದ್ಘಾಟನಾ ಪಂದ್ಯದ ಬಳಿಕ ಅಹಮದಾಬಾದ್ನಲ್ಲಿ ಹಾಲಿ ವಿಶ್ವಕಪ್ನ 2ನೇ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು ಗಮನಿಸಿದರೆ ಇಲ್ಲಿನ ಪಿಚ್ ಬ್ಯಾಟಿಂಗ್-ಸ್ನೇಹಿಯಂತಿದೆ. ಆದರೆ ಬ್ಯಾಟರ್ಗಳು ಕ್ರೀಸ್ಗೆ ಇಳಿದ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ. ಬಳಿಕ ಬಿರುಸಿನ ಆಟಕ್ಕಿಳಿದರೆ ಬೃಹತ್ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಡುವ ಸಾಧ್ಯತೆ ಇದ್ದು, ಆಗ ಚೇಸಿಂಗ್ ತಂಡಕ್ಕೆ ಅನುಕೂಲವಾಗಲಿದೆ.
ಸ್ಟಾರ್ ಆಗುವ ಅವಕಾಶ
ಸಾಮಾನ್ಯ ಕ್ರಿಕೆಟ್ ಪಂದ್ಯಕ್ಕಿಂತ ಭಾರತ&ಪಾಕ್ ನಡುವಿನ ಪಂದ್ಯದಲ್ಲಿ ಮಿಂಚುವ ಆಟಗಾರರಿಗೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುವ ಅವಕಾಶ ಹೆಚ್ಚಿರುತ್ತದೆ. ಚೇತನ್ ಶರ್ಮ, ಅಜಯ್ ಜಡೇಜಾ, ವೆಂಕಟೇಶ್ ಪ್ರಸಾದ್, ಹೃಷಿಕೇಶ್ ಕಾನಿಟ್ಕರ್, ಎಲ್. ಬಾಲಾಜಿ, ಶಿಖರ್ ಧವನ್, ಇಾರ್ನ್ ಪಠಾಣ್, ಜೋಗಿಂದರ್ ಶರ್ಮರಂಥ ಆಟಗಾರರನ್ನು ಕ್ರಿಕೆಟ್ ಪ್ರೇಮಿಗಳು ಇನ್ನೂ ನೆನಪಿಟ್ಟುಕೊಂಡಿರುವುದೇ ಇದಕ್ಕೆ ಸಾಕ್ಷಿ. ಇನ್ನು ದಿಗ್ಗಜ ಆಟಗಾರರಿಗೂ ತಮ್ಮ ಹಿರಿಮೆ ತೋರಿಸಲು ಇದು ಸದಾವಕಾಶ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಎಂಎಸ್ ಧೋನಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ ಈ ಪಂದ್ಯಗಳಲ್ಲೇ ಮಿಂಚಿ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ.
ವಿಶ್ವಕಪ್ ಮುಖಾಮುಖಿ:
*1992: ಭಾರತಕ್ಕೆ 43 ರನ್ ಜಯ.
*1996: ಭಾರತಕ್ಕೆ 39 ರನ್ ಜಯ.
*1999: ಭಾರತಕ್ಕೆ 47 ರನ್ ಜಯ.
*2003: ಭಾರತಕ್ಕೆ 6 ವಿಕೆಟ್ ಜಯ.
*2011: ಭಾರತಕ್ಕೆ 29 ರನ್ ಗೆಲುವು.
*2015: ಭಾರತಕ್ಕೆ 76 ರನ್ ಜಯ.
*2019: ಭಾರತಕ್ಕೆ 89 ರನ್ ಜಯ.