ಏಷ್ಯಾಕಪ್​ನಲ್ಲಿ ಭಾರತ-ಪಾಕ್​ ಪಂದ್ಯಕ್ಕೆ ತಣ್ಣೀರು ಎರಚುವುದೇ ಮಳೆ? ರದ್ದಾದರೆ ಏನಾಗುತ್ತೆ?

indo pak web
Published on

ಪಲ್ಲೆಕಿಲೆ (ಕ್ಯಾಂಡಿ): ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಗೆ ಬುಧವಾರವೇ ಚಾಲನೆ ದೊರೆತಿದ್ದರೂ, ಅಸಲಿ ಹಣಾಹಣಿ ಶುರುವಾಗುವುದು ಶನಿವಾರ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ. ಆದರೆ, ಪಂದ್ಯಕ್ಕೆ ಎದುರಾಗಿರುವ ಮಳೆಯ ಮುನ್ಸೂಚನೆಯು, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗಳಿಗೆ ತಣ್ಣೀರು ಎರಚುವ ಭೀತಿ ಹರಡಿದೆ.

ಶ್ರೀಲಂಕಾದ ಅತ್ಯಂತ ಸುಂದರ ಪ್ರವಾಸಿ ತಾಣವೆನಿಸಿರುವ ಕ್ಯಾಂಡಿ ನಗರದ ಹೊರವಲಯದಲ್ಲಿರುವ ಪಲ್ಲೆಕಿಲೆಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಹೈ-ವೋಲ್ಟೇಜ್​ ಪಂದ್ಯ ನಿಗದಿಯಾಗಿದೆ. ಗುರುವಾರ ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೂ ಇಲ್ಲೇ ನಡೆದಿದೆ. ಆದರೆ, ಕ್ಯಾಂಡಿಯಲ್ಲಿ ಈಗ ಮಳೆಗಾಲದ ಸಮಯವಾಗಿದ್ದು, ಶನಿವಾರ ಮಳೆ ಸುರಿಯುವ ಸಾಧ್ಯತೆ ಶೇ. 91ರಷ್ಟಿದೆ ಎಂದು ಸ್ಥಳಿಯ ಹವಾಮಾನ ಇಲಾಖೆ ತಿಳಿಸಿದೆ.

ಕ್ಯಾಂಡಿಯಲ್ಲಿ ಆಗಸ್ಟ್​-ಸೆಪ್ಟೆಂಬರ್​ ಸಮಯದಲ್ಲಿ ಕ್ರಿಕೆಟ್​ ಪಂದ್ಯ ನಿಗದಿಯಾಗಿರುವುದೇ ಸ್ಥಳಿಯರಿಗೆ ಅಚ್ಚರಿ. ಯಾಕೆಂದರೆ ಈ ಸಮಯದಲ್ಲಿ ಇಲ್ಲಿ ಮಳೆ ಇಲ್ಲದ ದಿನಗಳು ಮತ್ತು ಬಿಸಿಲು ಬರುವುದೇ ಅಪರೂಪ. ಪಲ್ಲೆಕಿಲೆಯಲ್ಲಿ ಈ ಹಿಂದೆ ನಡೆದಿರುವ 33 ಪಂದ್ಯಗಳಲ್ಲಿ 3 ಮಾತ್ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ನಡೆದಿವೆ. ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಟೂರ್ನಿಯಲ್ಲಿ ಭಾರತ ಆಡಲು ಒಪ್ಪದ ಕಾರಣ, ಕೊನೇಕ್ಷಣದಲ್ಲಿ ಶ್ರೀಲಂಕಾಕ್ಕೆ ಜಂಟಿ ಆತಿಥ್ಯ ನೀಡಲಾಗಿದೆ.

ಪಂದ್ಯ ರದ್ದಾದರೆ?

ಶನಿವಾರ ಮಳೆ ಕಾಡಿದರೂ, ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ ತಲಾ 20 ಓವರ್​ಗಳ ಪಂದ್ಯ ಆಯೋಜಿಸಲು ಆತಿಥೇಯ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಪ್ರಯತ್ನಿಸಲಿದೆ. ಇದರ ಹೊರತಾಗಿಯೂ ಪಂದ್ಯ ನಡೆಯದಿದ್ದರೆ, ಭಾರತ-ಪಾಕ್​ ತಲಾ 1 ಅಂಕ ಹಂಚಿಕೊಳ್ಳಲಿವೆ. ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಇದರಿಂದ, ಈಗಾಗಲೆ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದಿರುವ ಪಾಕಿಸ್ತಾನ ತಂಡದ ಸೂಪರ್​-4 ಪ್ರವೇಶ ಖಚಿತಗೊಳ್ಳಲಿದೆ. ಜತೆಗೆ ಭಾರತ ತಂಡ ಸೂಪರ್​-4ಗೆ ಏರಲು ಸೋಮವಾರ ಇಲ್ಲೇ ನೇಪಾಳ ವಿರುದ್ಧ ಆಡಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಎದುರಿಸಲಿದೆ. ಆ ಪಂದ್ಯವೂ ರದ್ದಾದರೆ ಭಾರತ ಸೂಪರ್​-4ಗೆ ಏರಲಿದೆ ಮತ್ತು ನೇಪಾಳ ಹೊರಬೀಳಲಿದೆ. ನಂತರ ಸೂಪರ್​-4 ಹಂತದ ಪಂದ್ಯಗಳು ಕೊಲಂಬೊದಲ್ಲಿ ನಿಗದಿಯಾಗಿದ್ದರೂ, ಅಲ್ಲೂ ಮಳೆ ಭೀತಿ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net