

ಚೆನ್ನೈ: ಅದೃಷ್ಟ ಕೈ ಕೊಟ್ಟರೆ ಈ ರೀತಿಯು ಆಗುತ್ತದೆ ಎಂಬುದಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ರನೌಟ್ ಆದ ಪರಿ ಉದಾಹರಣೆಯಾಗಿದೆ.
ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನ ಮೂರನೇ ದಿನದಾಟದಲ್ಲಿ ಪೂಜಾರ ರನೌಟ್ ಆದ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮೊಹೀನ್ ಅಲಿ ಬೌಲಿಂಗ್ನಲ್ಲಿ ಪೂಜಾರ ಮುನ್ನುಗ್ಗಿ ಹೊಡೆಯಲು ಯತ್ನಿಸುತ್ತಾರೆ. ಆದರೆ, ಚೆಂಡು ಕಾಲಿನ ಪ್ಯಾಡ್ಗೆ ತಗುಲಿ ಶಾರ್ಟ್ ಲೆಗ್ ವಿಭಾದಲ್ಲಿ ನಿಂತಿದ್ದ ಆಲ್ಲಿ ಪೋಪ್ ಕೈಗೆ ಸೇರುತ್ತದೆ. ತಕ್ಷಣ ಪೋಪ್ ಚೆಂಡನ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಕಡೆ ಎಸೆಯುತ್ತಾರೆ. ಅಷ್ಟರಲ್ಲಿ ಪೂಜಾರ ಹಿಂದೆ ತಿರುಗಿ ಕ್ರೀಸ್ನಲ್ಲಿ ಬ್ಯಾಟ್ ಇಡುತ್ತಾರೆ. ಆದರೆ, ಬ್ಯಾಟ್ ಪೂಜಾರ ಕೈಯಿಂದ ಜಾರಿ ಕೆಳಗೆ ಬೀಳುತ್ತದೆ. ಕ್ರೀಸ್ ಒಳಗೆ ಬರುವಷ್ಟರಲ್ಲಿ ಬೆನ್ ಫೋಕ್ಸ್ ವಿಕೆಟ್ ಬೀಳಿಸಿರುತ್ತಾರೆ. ಅಲ್ಲಿಗೆ ಪೂಜಾರ ಔಟ್ ಎಂದು ನಿರ್ಣಯಿಸಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಜಕ್ಕೂ ಇದು ಪೂಜಾರ ಅವರ ದುರಾದೃಷ್ಟ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ 6 ವಿಕೆಟ್‌ಗೆ 300 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 329 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ರನ್ ಗಳಿಸಲು ಪರದಾಡಿ ಕೇವಲ 134 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಸಂಪಾದಿಸಿದ ಭಾರತ ತಂಡ 2ನೇ ಸರದಿಯಲ್ಲಿ ದಿನದಂತ್ಯಕ್ಕೆ 1 ವಿಕೆಟ್‌ಗೆ 54 ರನ್ ಪೇರಿಸಿತು.
ಮೂರನೇ ದಿನದಾಟ ಆರಂಭಿಸಿರುವ ಭಾರತ ಈ ಕ್ಷಣದವರೆಗೆ 6 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿದ್ದು, 358 ರನ್ಗಳ ಮುನ್ನಡೆ ಸಾಧಿಸಿದೆ. ಸದ್ಯ ಕ್ರೀಸ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್)