

ಅಹಮಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತದ ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 241 ರನ್ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದೆ. ವಿರಾಟ್ ಕೊಹ್ಲಿ (54) ಮತ್ತು ಕೆ.ಎಲ್. ರಾಹುಲ್ (66) ಹೊರತುಪಡಿಸಿದರೆ, ಉಳಿದ ಯಾವೊಬ್ಬ ಬ್ಯಾಟರ್ಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ನಿಗದಿತ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತ 240 ರನ್ ಕಲೆಹಾಕಿತು. ಈ ಮೂಲಕ ಆಸಿಸ್ ಗೆಲುವಿಗೆ 241 ರನ್ಗಳ ಸಾಧಾರಣ ಗುರಿಯನ್ನು ನೀಡಿದೆ. ತಂಡದ ಪರ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್ ಗಳಿಸಿದ್ದ ಗಿಲ್, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ 47 ರನ್ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್, ಅರ್ಧ ಶತಕಕ್ಕೆ ಇನ್ನೂ ಮೂರು ರನ್ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್ಗೆ ಮರಳಿದರು. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.
ವಿರಾಟ್ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದರೆ, ಸಮಿಫೈನಲ್ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್ ಅಯ್ಯರ್ ಕೇವಲ 4 ರನ್ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್ಗಳ ಜತೆಯಾಟ ನೀಡಿತ್ತು.
ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್ಗೆ ಮಿಚೆಲ್ ಸ್ಟಾರ್ಕ್ ಪೆವಿಲಿಯನ್ ಹಾದಿ ತೋರಿದರು. ನೆದರ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್ ಗಳಿಸಿದ್ದ ರಾಹುಲ್, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್ ಗಳಿಸಿದರು. ಆಸಿಸ್ ಬೌಲರ್ಗಳನ್ನು ಎದುರಿಸಲು ರಾಹುಲ್ ತಡಕಾಡಿದರು.
ಉಳಿದಂತೆ ಮೊಹಮ್ಮದ್ ಶಮಿ 6 ರನ್ ಗಳಿಸಿದರೆ, ಜಸ್ಪ್ರೀತ್ ಬೂಮ್ರಾ 1, ಸೂರ್ಯಕುಮಾರ್ ಯಾದವ್ 18 ಹಾಗೂ ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್ ಸಿರಾಜ್ 9 ರನ್ ಗಳಿಸಿ ಅಜೇಯರಾಗಿ ಉಳಿದರು.
ನಿರ್ಣಾಯಕ ಪಂದ್ಯದಲ್ಲಿ ಆಸಿಸ್ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮಿಚೆಲ್ ಸ್ಟಾರ್ಕ್ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್ ಕ್ಯುಮಿನ್ಸ್ ಹಾಗೂ ಜೋಶ್ ಹಜಾಲ್ವುಡ್ ತಲಾ 2 ವಿಕೆಟ್ ಪಡೆದರೆ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಕುಲದೀಪ್ ಯಾದವ್ ರನೌಟ್ಗೆ ತುತ್ತಾದರು.