

Piyush Goyal: ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
ಲೋಕಸಭೆಯಲ್ಲಿ ಗುರುವಾರ (ಜುಲೈ 31) ಭಾರತದ ರಫ್ತಿನ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಒಂದು ದಿನದ ಬಳಿಕ ಮಾತನಾಡಿದ ಸಚಿವರು, ಭಾರತೀಯ ಸರಕುಗಳ ಮೇಲೆ ಅಮೆರಿಕ ಘೋಷಿಸಿರುವ ಶೇ.25ರಷ್ಟು ಸುಂಕದ ಪರಿಣಾಮಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು, ರಫ್ತುದಾರರ, ಕೈಗಾರಿಕೆಗಳು ಮತ್ತು ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದ್ದು, ಈ ವಿಷಯದ ಮೌಲ್ಯಮಾಪನದ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರೈತರು, ಕಾರ್ಮಿಕರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ರಫ್ತುದಾರರು, MSMEಗಳು ಮತ್ತು ಕೈಗಾರಿಕಾ ವಲಯದ ಪಾಲುದಾರರ ಹಿತ ಕಾಪಾಡಲು ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದರು.
ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ನಾವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ ಗೋಯಲ್, ಕಳೆದ ಹನ್ನೊಂದು ವರ್ಷದಲ್ಲಿ ಭಾರತ 'ದುರ್ಬಲವಾದ ಐದು' ದೇಶಗಳ ಸಾಲಿನಿಂದ, ವಿಶ್ವದ ಪ್ರಮುಖ ಆರ್ಥಿಕತೆಯ ದೇಶವಾಗಿ ಪರಿವರ್ತನೆಗೊಂಡಿದೆ.
ಇನ್ನು ಕೆಲವೇ ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ. ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಅರ್ಥಶಾಸ್ತ್ರಜ್ಞರು ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ ಪ್ರಕಾಶಮಾನವಾದ ತಾಣವಾಗಿ ನೋಡುತ್ತಾರೆ. ಭಾರತವು ಜಾಗತಿಕ ಬೆಳವಣಿಗೆಗೆ ಸುಮಾರು 16% ರಷ್ಟು ಕೊಡುಗೆ ನೀಡಿದೆ ಎಂದರು. (ಏಜೆನ್ಸೀಸ್)