ಕರೊನಾ ವೈರಸ್​: ವೈದ್ಯಕೀಯ ಪರಿಷತ್ತು ನೀಡಿದೆ ಗಾಬರಿ ತರುವ ವಿಷಯ!

ICMR
Published on

ನವದೆಹಲಿ : ಇದಾಗಲೇ ಲಕ್ಷ ಲಕ್ಷ ಜನರನ್ನು ಬಲಿ ಪಡೆದಿರುವ ಕರೊನಾ ವೈರಸ್​, ಕ್ಷಣ ಕ್ಷಣಕ್ಕೂ ತನ್ನ ಪ್ರಭಾವ ತೋರುತ್ತಲೇ ಇದೆ. ಯಾರಿಗೆ ಯಾವಾಗ, ಹೇಗೆ ಈ ವೈರಸ್​ ಒಕ್ಕರಿಸಿಕೊಳ್ಳುತ್ತದೆ ಎಂಬ ಮಾಹಿತಿಯೂ ಇಲ್ಲದೇ ಕ್ಷಣಮಾತ್ರದಲ್ಲಿ ದೇಹ ಸೇರುವ ಈ ವೈರಸ್​ ಕುರಿತಂತೆ ಇದಾಗಲೇ ಎಲ್ಲರಲ್ಲಿಯೂ ನಡುಕ ಶುರುವಾಗಿದೆ.

ಈ ಮಹಾಮಾರಿಯನ್ನು ಹೊಡೆದೋಡಿಸಲು ಈಗಾಗಲೇ ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ವಿಧವಿಧ ಸಂಶೋಧನೆ ಮಾಡುತ್ತಿದ್ದರೂ, ವೈರಸ್​ ನಿಯಂತ್ರಿಸುವುದು ಅಷ್ಟು ಸುಲಭವಾಗಿ ಉಳಿದಿಲ್ಲ.

ಈ ನಡುವೆಯೇ ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್​) ಭಯಾನಕ ಎನ್ನುವಂಥ ವಿಷಯವನ್ನು ಹೊರಗೆಡವಿದೆ. ಅದೇನೆಂದರೆ ನವೆಂಬರ್ ಮಧ್ಯಭಾಗದಲ್ಲಿ ಕರೊನಾ ಸಮಸ್ಯೆ ಇನ್ನಷ್ಟು ತಾರರಕ್ಕೇರಲಿದೆ ಎಂದು ಸಂಸ್ಥೆ ಹೇಳಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಚಿಸಿದ್ದ ಕಾರ್ಯಾಚರಣೆ ಸಂಶೋಧನಾ ಗುಂಪು ಸಂಶೋಧನೆ ನಡೆಸಿ ವರದಿ ಸಲ್ಲಿಸಿದೆ. ಇಲ್ಲಿಯವರೆಗೆ ಲಾಕ್‌ಡೌನ್ ಇದ್ದ ಹಿನ್ನೆಲೆಯಲ್ಲಿ, ವೈರಸ್​ಗೆ ಹರಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಅನಿವಾರ್ಯವಾಗಿ ಜನರ ಒತ್ತಾಸೆಯ ಮೇರೆಗೆ ಲಾಕ್​ಡೌನ್​ ಸಡಿಲಿಕೆಯಿಂದಾಗಿ ಕರೊನಾ ಇನ್ನಷ್ಟು ಪ್ರಭಾವ ತೋರುತ್ತಿದೆ. ನವೆಂಬರ್ ಮಧ್ಯಭಾಗದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಇಲ್ಲಿಯವರೆಗೆ ಭಾರತದಲ್ಲಿ ಲಾಕ್ ಡೌನ್ ಜಾರಿ ಮಾಡದೇ ಹೋಗಿದ್ದರೆ ಭಾರತದಲ್ಲಿ ಸೋಂಕಿನ ಪ್ರಮಾಣ ಈಗಿರುವ ಪ್ರಮಾಣಕ್ಕಿಂತಲೂ ಶೇ. 69-97ರಷ್ಟಾಗುತ್ತಿತ್ತು. ಲಾಕ್​ಡೌನ್​ನಿಂದ ಸೋಂಕಿನ ಪ್ರಮಾಣ ಕಡಿಮೆಯಿದೆ ಎಂದು ಐಸಿಎಂಆರ್ ಅಭಿಪ್ರಾಯಪಟ್ಟಿದೆ.

ಇದಕ್ಕೆ ಉದಾಹರಣೆ ನೀಡಿರುವ ಐಸಿಎಂಆರ್​, ಆರು ವಾರಗಳ ಲಾಕ್‌ಡೌನ್ ಬಳಿಕ ಮೇ 6ರಂದು ದೇಶದಲ್ಲಿ ಅಂದಾಜು 5,29,872 ಪ್ರಕರಣಗಳು ದಾಖಲಾಗಬೇಕಿತ್ತು. ಆದರೆ ಲಾಕ್‌ಡೌನ್ ಪರಿಣಾಮದಿಂದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ 3.32 ಲಕ್ಷ ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಇದರಿಂದಾಗಿ ಸೋಂಕಿನ ಪ್ರಮಾಣ ಕಡಿಮೆಯಾದದ್ದು ಮಾತ್ರವಲ್ಲದೇ ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್‌ಗಳ ಅವಶ್ಯಕತೆ ಶೇಕಡಾ 83ರಷ್ಟು ಕಡಿಮೆ ಮಾಡಲು ನೆರವಾಗಿದೆ.

ಆದರೆ ಈಗ ವೈರಸ್​ ಏರುಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ, ನವೆಂಬರ್​ ಮಧ್ಯಭಾಗದಲ್ಲಿ ಕರೊನಾ ಸಮಸ್ಯೆ ಇನ್ನಷ್ಟು ತಾರರಕ್ಕೇರಲಿದೆ ಎಂದು ಸಂಸ್ಥೆ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net