

ಬೆಂಗಳೂರು: ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಯಾವುದಾದರೂ ದ್ವಿಪಯ ಸರಣಿಯಲ್ಲಿ ವಿಫಲರಾದಾಗ ಆ ಸರಣಿಗೆ 'ಐಸಿಸಿ' ಎಂದು ಹೆಸರಿಡಿ ಎಂಬುದಾಗಿ ಅವರ ಅಭಿಮಾನಿಗಳು ಪ್ರೀತಿಯಿಂದ ಒತ್ತಾಯಿಸುತ್ತಿದ್ದರು! ಅದಕ್ಕೆ ಕಾರಣ ಐಸಿಸಿ ಟೂರ್ನಿಗಳಲ್ಲಿ ಧವನ್ ಅವರ ಬಲಿಷ್ಠ ಬ್ಯಾಟಿಂಗ್ ದಾಖಲೆ. ಕಳೆದ 10 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಶಿಖರ್ ಧವನ್, ಇದೀಗ ತವರಿನ ಏಕದಿನ ವಿಶ್ವಕಪ್ ತಂಡದಿಂದ ವಂಚಿತರಾಗಿದ್ದಾರೆ.
ಏಕದಿನ ಮಾದರಿಯ ಐಸಿಸಿ ಟೂರ್ನಿಗಳಲ್ಲಿ 65ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಭಾರತದ ಏಕಮಾತ್ರ ಬ್ಯಾಟರ್ ಎಂಬ ಹೆಗ್ಗಳಿಕೆಯ ಧವನ್, ಈ ಮುನ್ನ 2015, 2019ರ ಏಕದಿನ ವಿಶ್ವಕಪ್ ಮತ್ತು 2013, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು. 37 ವರ್ಷದ ಧವನ್ ಅನುಭವಕ್ಕೆ ಈ ಬಾರಿ ಮಾನ್ಯತೆ ಲಭಿಸಿಲ್ಲ. ಯುವ ಆರಂಭಿಕ ಶುಭಮಾನ್ ಗಿಲ್ಗೆ ಆಯ್ಕೆಗಾರರು ಮಣೆ ಹಾಕಿದ್ದಾರೆ. ನಾಯಕ ರೋಹಿತ್ ಶರ್ಮ ಜತೆ ಧವನ್ ಯಶಸ್ವಿ ಆರಂಭಿಕರಾಗಿ ಮಿಂಚಿದ್ದರೂ ಅವರ ಜತೆಯಾಟಕ್ಕೆ ಈಗ ಪೂರ್ಣವಿರಾಮ ಬಿದ್ದಂತಾಗಿದೆ.
ಐಸಿಸಿ ಟೂರ್ನಿಗಳಿಗೆ ಹೋಲಿಸಿದರೆ ಶಿಖರ್ ಧವನ್ ಅವರ ಒಟ್ಟಾರೆ ಏಕದಿನ ಕ್ರಿಕೆಟ್ ವೃತ್ತೀಜಿವನದ ಬ್ಯಾಟಿಂಗ್ ಸರಾಸರಿ (44) ಬಹಳ ಕಡಿಮೆಯಾಗಿದೆ. ಹೀಗಾಗಿ ಅವರನ್ನು ಐಸಿಸಿ ಟೂರ್ನಿಗಳ ಸ್ಪೆಷಲಿಸ್ಟ್ ಎಂದೇ ಪರಿಗಣಿಸಲಾಗುತ್ತದೆ. 'ಮಿಸ್ಟರ್ ಐಸಿಸಿ' ಎಂಬ ಹೆಸರನ್ನೂ ಹೊಂದಿದ್ದರು.
2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ 90.7ರ ಸರಾಸರಿಯಲ್ಲಿ 363 ರನ್ ಗಳಿಸಿ ಭಾರತ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ ಧವನ್ ನಂತರ 2015ರ ಏಕದಿನ ವಿಶ್ವಕಪ್ನಲ್ಲಿ 51.5ರ ಸರಾಸರಿಯಲ್ಲಿ 412 ರನ್ ಸಿಡಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ 67.7ರ ಸರಾಸರಿಯಲ್ಲಿ 338 ರನ್ ಸಿಡಿಸಿದ್ದರು. 2019ರ ಏಕದಿನ ವಿಶ್ವಕಪ್ನಲ್ಲಿ 62.6ರ ಸರಾಸರಿಯಲ್ಲಿ 125 ರನ್ ಗಳಿಸಿದ್ದರು. ಗಾಯದಿಂದಾಗಿ ಧವನ್ ಆ ವಿಶ್ವಕಪ್ನಲ್ಲಿ ಕೇವಲ ಎರಡೇ ಪಂದ್ಯ ಆಡಿದ್ದರು. ಈ ಪೈಕಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಶತಕವನ್ನೂ ಸಿಡಿಸಿದ್ದರು.
ವೃತ್ತೀಜಿವನದಲ್ಲಿ ಒಟ್ಟಾರೆ 167 ಏಕದಿನ ಪಂದ್ಯ ಆಡಿದ 6,793 ರನ್ ಗಳಿಸಿರುವ ಶಿಖರ್ ಧವನ್ ವಿಶ್ವಕಪ್ ತಂಡದಿಂದ ಹೊರಬೀಳುವುದರೊಂದಿಗೆ ಅವರಿಗೆ ಟೀಮ್ ಇಂಡಿಯಾದ ಬಾಗಿಲು ಕೂಡ ಇನ್ನು ಶಾಶ್ವತವಾಗಿ ಮುಚ್ಚಿದಂತಾಗಿದೆ.