ಭಾರತ ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು: ಶಶಿ ತರೂರ್| Shashi Tharoor

Shashi Tharoor
Published on

Shashi Tharoor: ರಷ್ಯಾದಿಂದ ಭಾರತದ ತೈಲ ಖರೀದಿಗೆ ದಂಡವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಭಾರಿ ಸುಂಕ ವಿಧಿಸಿದ್ದಾರೆ. ಆದರೆ, ಚೀನಾಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಇದರಲ್ಲಿ ಅಮೆರಿಕದ ಗುಪ್ತ ಸಂದೇಶವಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ (ಗುರುವಾರ ಆಗಸ್ಟ್​ 7) ಹೇಳಿದ್ದಾರೆ.

ಚೀನಾ ಮತ್ತು ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವ ಬಗ್ಗೆ ಮಾತನಾಡಿದ ತರೂರ್​, ಚೀನಾವು ರಷ್ಯಾದಿಂದ ಸುಮಾರು ಭಾರತಕ್ಕಿಂತ ಎರಡು ಪಟ್ಟು ತೈಲ ಖರೀದಿಸುತ್ತಿದೆ ಎಂದು ಹೇಳಿದರು. ಹೆಚ್ಚುವರಿ ಸುಂಕಗಳು ಜಾರಿಗೆ ಬರುವ ಮೊದಲು ಅವರಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ, ಭಾರತಕ್ಕೆ ಕೇವಲ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಘೋಷಿಸಲಾದ 25% ರಷ್ಟು ಸುಂಕವು ಗುರುವಾರದಿಂದ ಜಾರಿಗೆ ಬಂದಿದ್ದು, ಈ ತಿಂಗಳ ಕೊನೆಯಲ್ಲಿ ಅದು 50% ಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.

ಮುಂದಿನ 3 ವಾರಗಳಲ್ಲಿ ಏನೂ ಬದಲಾಗದಿದ್ದರೆ, ನಾವು ಅಮೆರಿಕದ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತವು ಬೆದರಿಕೆ ನೀತಿಯನ್ನು ಹೊಂದಿಲ್ಲ, ಆದ್ದರಿಂದ ನಾವು ಮೂರು ವಾರಗಳ ಕಾಲ ಕಾಯಬೇಕು, ಮತ್ತು ಏನೂ ಬದಲಾಗದಿದ್ದರೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಮೆರಿಕದ ಆಮದುಗಳ ಮೇಲಿನ ಭಾರತದ ಸುಂಕಗಳು ಸರಾಸರಿ 17% ರಷ್ಟಿದೆ, ಆದ್ದರಿಂದ ಟ್ರಂಪ್ ವಿಧಿಸಿದ ಸುಂಕದ ದರವು ಸಮಾನವಾಗಿ ಕಾಣುವುದಿಲ್ಲ ಎಂದು ತರೂರ್​ ತಿಳಿಸಿದ್ದಾರೆ.

ಅಮೆರಿಕದಿಂದ ಬೇರೊಂದು ಗುಪ್ತ ಸಂದೇಶ ಬಂದಂತೆ ಕಾಣುತ್ತಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಂಡ ನಂತರ ಸರ್ಕಾರ ಪ್ರತಿಕ್ರಿಯಿಸಬೇಕು" ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net