ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವ ಯೋಜನೆ, ಸಮರ್ಥ ಆಡಳಿತದಿಂದ ಭಾರತವು ವಿಶ್ವದಲ್ಲೇ ಶಕ್ತಿಶಾಲಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿಕಾರಿಪುರದ ಸ್ವಗೃಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಸಂಚಿಕೆ ವೀಕ್ಷಿಸಿ ಮಾತನಾಡಿ, ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ನಾಯಕ ಮೋದಿ. ಜನಪರ ಕಾರ್ಯಗಳ ಮೂಲಕ ದೇಶದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪ್ರಮುಖ ಸಂಗತಿಗಳನ್ನು ಮನ್ ಕಿ ಬಾತ್‌ನಲ್ಲಿ ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಮನ್ ಕಿ ಬಾತ್ ಸಂಚಿಕೆಯನ್ನು ಆಲಿಸಬೇಕು. ಅವರ ದೃಢವಾದ ಸಂಕಲ್ಪ ಶಕ್ತಿ, ರಾಷ್ಟ್ರೀಯ ಚಿಂತನೆಗಳು, ಜಾಗತಿಕ ಮಟ್ಟದಲ್ಲಿ ದೃಢ ನಿಲುವಿನಿಂದ ವಿಶ್ವನಾಯಕನಾಗಿ ಹೊರಹೊಮ್ಮಿದ್ದಾರೆ. ನಮ್ಮ ಪ್ರತಿ ಕಾರ್ಯಕರ್ತರಿಗೂ ಮೋದಿ ಸ್ಫೂರ್ತಿ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕರು, ಮಹಿಳೆಯರು, ಯುವಕರು ಹಾಗೂ ಎಲ್ಲ ವರ್ಗದ ಜನರಿಗೂ ಉಪಯುಕ್ತ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಭಾರತ ಇಂದು ಶಕ್ತಿಶಾಲಿ ಸೇನಾಬಲ ಹೊಂದಿದೆ. ರಾಷ್ಟ್ರೀಯ ಚಿಂತನೆಗಳ ಹರಿಕಾರ ಪ್ರಧಾನಿ ಮೋದಿ ಎಂದು ಬಣ್ಣಿಸಿದರು.
ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಹಂತ ಹಂತವಾಗಿ ಉನ್ನತ ಜವಾಬ್ದಾರಿ ವಹಿಸಿಕೊಂಡು ಈಗ ಮೂರನೇ ಬಾರಿಗೆ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಪಕ್ಷ ಸಂಘಟಿಸುವ ಪ್ರತಿಯೊಬ್ಬರಿಗೂ ಮೋದಿ ಮಾದರಿ ನಾಯಕರಾಗುತ್ತಾರೆ. ಕಾರ್ಯಕರ್ತರು ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು. ಪಕ್ಷ ಬೆಳೆದಂತೆ ನಾವು ಬೆಳೆಯುತ್ತೇವೆ ಎಂದು ತಿಳಿಸಿದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಪತ್ನಿ ಲಲಿತಾ ಸಂಕೇಶ್ವರ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಸಂಚಿಕೆ ಆಲಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್, ಮಂಜುನಾಥ್, ಮಧು ಹೋತನಕಟ್ಟೆ, ಗುರುಪ್ರಸಾದ್, ಪ್ರವೀಣ್ ಶೆಟ್ಟಿ, ರಾಘವೇಂದ್ರ ಇತರರಿದ್ದರು.