

ನವದೆಹಲಿ: ಪಾಕಿಸ್ತಾನದಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಇಲ್ಲ-ಸಲ್ಲದ ಹೇಳಿಕೆಗಳನ್ನು ಹರಡುತ್ತಿದ್ದ ಚೀನಾದ ಮಾಧ್ಯಮಗಳನ್ನು ಸರ್ಕಾರ ಟೀಕಿಸಿದ ನಂತರ, ಭಾರತ ಬುಧವಾರ (14) ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಚೀನಾದ ಸರ್ಕಾರಿ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ಗೆ ಚೀನಾದ ಖ್ಯಾತ ಮಾಧ್ಯಮವಾಗಿರುವ ಗ್ಲೋಬಲ್ ಟೈಮ್ಸ್ ಹಾಗೂ ಕ್ಸಿನ್ಹುವಾ ಅಪಪ್ರಚಾರ ಮತ್ತು ತಪ್ಪಾದ ಮಾಹಿತಿ ಹಂಚಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, ಗ್ಲೋಬಲ್ ಟೈಮ್ಸ್ ಮತ್ತು ಕ್ಸಿನ್ಹುವಾ ಮಾಧ್ಯಮದ ಎಕ್ಸ್ ಖಾತೆಯನ್ನು ಬ್ಲಾಕ್ ಮಾಡಿದೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂದೂರ್ ಬಗ್ಗೆ ಕವರೇಜ್ ವೇಳೆ ಗ್ಲೋಬಲ್ ಮೀಡಿಯಾ ಚಾನೆಲ್ ತಪ್ಪಾದ ಮಾಹಿತಿ ಪ್ರಸಾರ ಮಾಡಿತ್ತು. ಅಲ್ಲದೇ ಪಾಕಿಸ್ತಾನ ಮತ್ತು ಉಗ್ರರು ಆಪರೇಷನ್ ಸಿಂದೂರ್ಗೆ ಬಲಿಯಾದ ಅಮಾಯಕರು ಎಂಬಂತೆ ಬಿಂಬಿಸುವ ಪ್ರಯತ್ನ ನಡೆಸಿತ್ತು ಎಂದು ಭಾರತ ಆರೋಪಿಸಿದೆ.
ಗಮನಾರ್ಹವಾಗಿ, ಆಪರೇಷನ್ ಸಿಂಧೂರ್ ಸಮಯದಲ್ಲಿ ಗ್ಲೋಬಲ್ ಟೈಮ್ಸ್ ನಕಲಿ ಸುದ್ದಿಗಳನ್ನು ಹರಡುವಲ್ಲಿ ಮುಂಚೂಣಿಯಲ್ಲಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನವು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ 5 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಅದು ಹೇಳಿಕೊಂಡಿತ್ತು. ಆದರೆ ಅಂತಹ ಯಾವುದೇ ಪತನಗೊಂಡ ವಿಮಾನದ ಅವಶೇಷಗಳು ಕಂಡುಬಂದಿಲ್ಲ, ಯಾವುದೇ ಐದು ಜೆಟ್ಗಳನ್ನು ಹೊಡೆದುರುಳಿಸಲಾಗಿಲ್ಲ.
(ಏಜೆನ್ಸೀಸ್)