ಏಷ್ಯಾಕಪ್​ನಲ್ಲಿ ಇಂದು ಭಾರತ-ಪಾಕ್​ ಸಮರ; ಕಾಡುತ್ತಿದೆ ಮಳೆ ಭೀತಿ

asia cup web
Published on

ಪಲ್ಲೆಕಿಲೆ (ಕ್ಯಾಂಡಿ): ಉಪಖಂಡದ ಅತಿದೊಡ್ಡ ಕ್ರಿಕೆಟ್​ ಹಬ್ಬವೆನಿಸಿರುವ ಏಷ್ಯಾಕಪ್​ ಏಕದಿನ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಶನಿವಾರ ಮುಖಾಮುಖಿ ಆಗಲಿವೆ. ಇದರೊಂದಿಗೆ ಟೂರ್ನಿಯ ಕಾವು ಏರಲಿದ್ದು, ಕ್ರಿಕೆಟ್​ ಪ್ರೇಮಿಗಳಲ್ಲಿ ಕುತೂಹಲವೂ ಕೆರಳಿದೆ. ಮುಂಬರುವ ತವರಿನ ವಿಶ್ವಕಪ್​ ಸಿದ್ಧತೆಗೆ ಪ್ರಮುಖ ವೇದಿಕೆಯಾಗಿರುವ ಟೂರ್ನಿಯಲ್ಲಿ ರೋಹಿತ್​ ಶರ್ಮ ಪಡೆ ಶುಭಾರಂಭ ಕಾಣುವ ತವಕದಲ್ಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಕಾಡುತ್ತಿದ್ದು, ಸ್ಪಷ್ಟ ಫಲಿತಾಂಶ ಕಾಣುವಷ್ಟು ಓವರ್​ಗಳ ಆಟವಾದರೂ ನಡೆಯುವುದೇ ಎಂಬ ಆತಂಕವೂ ಇದೆ.

ಕಳೆದ ವರ್ಷದ ಟಿ20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಮೆಲ್ಬೋರ್ನ್​ನಲ್ಲಿ ಕೊನೇ ಬಾರಿ ಮುಖಾಮುಖಿಯಾಗಿದ್ದವು ಮತ್ತು ಆಗ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ನಿರ್ವಹಣೆಯ ಮೂಲಕ ವಿಶ್ವದ ಗಮನಸೆಳೆದಿದ್ದರು. ಈ ಬಾರಿ ಅವರು ಅದೇ ಲಯದಲ್ಲಿ ಮುಂದುವರಿಯುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಅತ್ತ ಪಾಕಿಸ್ತಾನವೂ, ತವರಿನಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಆತ್ಮವಿಶ್ವಾಸದಲ್ಲಿ ಭಾರತಕ್ಕೆ ತಿರುಗೇಟು ನೀಡುವ ಛಲದಲ್ಲಿದೆ. ಪ್ರಮುಖವಾಗಿ ಭಾರತದ ಬ್ಯಾಟಿಂಗ್​ ಮತ್ತು ಪಾಕಿಸ್ತಾನದ ಬೌಲಿಂಗ್​ ವಿಭಾಗದ ಮುಖಾಮುಖಿಯಾಗಿ ಈ ಪಂದ್ಯ ಬಿಂಬಿಸಲ್ಪಟ್ಟಿದೆ.

ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಶುಭಮಾನ್​ ಗಿಲ್​, ಶ್ರೇಯಸ್​ ಅಯ್ಯರ್​ ಸಹಿತ ಸ್ಟಾರ್​ ಬ್ಯಾಟರ್​ಗಳಿಂದ ಕೂಡಿರುವ ಭಾರತಕ್ಕೆ ಪಾಕಿಸ್ತಾನದ ವೇಗಿಗಳಾದ ಶಾಹೀನ್​ ಷಾ ಅಫ್ರಿದಿ, ಹ್ಯಾರಿಸ್​ ರೌಫ್​ ಮತ್ತು ನಸೀಮ್​ ಷಾ ಪ್ರಮುಖ ಸವಾಲೆನಿಸಿದ್ದಾರೆ. ಅದರಲ್ಲೂ ಪವರ್​ಪ್ಲೇನಲ್ಲಿ ಅಫ್ರಿದಿ-ನಸೀಮ್​ ಜೋಡಿಯನ್ನು ಸಮರ್ಥವಾಗಿ ಎದುರಿಸುವುದು ಅಗತ್ಯವಾಗಿದೆ. ಕೆಎಲ್​ ರಾಹುಲ್​ ಫಿಟ್​ ಆಗದ ಕಾರಣ ಮಧ್ಯಮ ಕ್ರಮಾಂಕದ ಗೊಂದಲ ಮುಂದುವರಿದಿರುವುದರಿಂದ ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ.

ಇನ್ನು ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ರನ್​ಮಳೆ ಹರಿಸಿತ್ತು. ಬಾಬರ್​ ಅಜಮ್​, ಮೊಹಮದ್​ ರಿಜ್ವಾನ್​, ಇಫ್ತಿಕರ್​ ಅಹ್ಮದ್​ ಬ್ಯಾಟಿಂಗ್​ ಗಮನಸೆಳೆದಿತ್ತು. ಇವರಿಗೆ ಭಾರತದ ತ್ರಿವಳಿ ವೇಗಿಗಳಾದ ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಶಮಿ, ಸಿರಾಜ್​ ಕಡಿವಾಣ ಹಾಕಬೇಕಿದೆ. ಎಡಗೈ ಸ್ಪಿನ್ನರ್​ಗಳಾದ ಕುಲದೀಪ್​ ಯಾದವ್​, ರವೀಂದ್ರ ಜಡೇಜಾ ಕೂಡ ಪಾಕ್​ಗೆ ಅಪಾಯಕಾರಿ ಆಗಬಲ್ಲರು.

ವಿಶ್ವಕಪ್​ ವರ್ಷದಲ್ಲೂ ಭಾರತ ತನ್ನ ಸಂಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಇದುವರೆಗೆ ಏಕದಿನ ಪಂದ್ಯ ಆಡಿಲ್ಲ. ಕಳೆದ ವಿಂಡೀಸ್​ ಪ್ರವಾಸದ ಏಕದಿನ ಸರಣಿಯಲ್ಲಿ ಪ್ರಮುಖ ಆಟಗಾರರು ಕಣಕ್ಕಿಳಿದಿರಲಿಲ್ಲ. ಆದರೆ, ಇದೀಗ ರಾಹುಲ್​ ಹೊರತಾಗಿ, ಬುಮ್ರಾ, ಶ್ರೇಯಸ್​ ಸಹಿತ ಭಾರತದ ಬೇರೆಲ್ಲ ಆಟಗಾರರು ಫಿಟ್​ ಆಗಿದ್ದಾರೆ. ಅತ್ತ ಪಾಕಿಸ್ತಾನ ತಂಡಕ್ಕೆ ಎಲ್ಲ ಪ್ರಮುಖ ಆಟಗಾರರು ಲಭ್ಯರಿದ್ದು, ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯೊಂದಿಗೆ ಭರ್ಜರಿ ಸಿದ್ಧತೆ ನಡೆಸಿತ್ತು. ಹೀಗಾಗಿ ಪಂದ್ಯ ಕುತೂಹಲ ಹೆಚ್ಚಿಸಿದೆ.

ಕಾಡುತ್ತಿದೆ ಮಳೆ ಭೀತಿ

ಪಲ್ಲೆಕಿಲೆಯಲ್ಲಿ ಗುರುವಾರ ಶ್ರೀಲಂಕಾ&ಬಾಂಗ್ಲಾ ನಡುವಿನ ಪಂದ್ಯ ಮಳೆ ಅಡಚಣೆಯಿಲ್ಲದೆ ನಡೆದಿದ್ದರೂ, ಶನಿವಾರ ಇಲ್ಲಿ ಮಳೆ ಸುರಿಯುವ ಸಾಧ್ಯತೆ ಅಧಿಕವಾಗಿದೆ. ಕ್ಯಾಂಡಿಯಲ್ಲಿ ಆಗಸ್ಟ್-ಸೆಪ್ಟೆಂಬರ್​ ಸಮಯದಲ್ಲಿ ಕ್ರಿಕೆಟ್​ ಪಂದ್ಯ ನಿಗದಿಯಾಗಿರುವುದೇ ಸ್ಥಳಿಯರಿಗೆ ಅಚ್ಚರಿ. ಯಾಕೆಂದರೆ ಈ ಸಮಯದಲ್ಲಿ ಇಲ್ಲಿ ಮಳೆ ಇಲ್ಲದ ದಿನಗಳು ಮತ್ತು ಬಿಸಿಲು ಬರುವುದೇ ಅಪರೂಪ. ಪಲ್ಲೆಕಿಲೆಯಲ್ಲಿ ಈ ಹಿಂದೆ ನಡೆದಿರುವ 33 ಪಂದ್ಯಗಳಲ್ಲಿ 3 ಮಾತ್ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ನಡೆದಿವೆ. ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಟೂರ್ನಿಯಲ್ಲಿ ಭಾರತ ಆಡಲು ಒಪ್ಪದ ಕಾರಣ, ಕೊನೇಕ್ಷಣದಲ್ಲಿ ಶ್ರೀಲಂಕಾಕ್ಕೆ ಜಂಟಿ ಆತಿಥ್ಯ ನೀಡಲಾಗಿದೆ.

ಟೀಮ್​ ನ್ಯೂಸ್​:

ಭಾರತ: ಕೆಎಲ್​ ರಾಹುಲ್​ ಅಲಭ್ಯರಾಗಿರುವುದರಿಂದ ಇಶಾನ್​ ಕಿಶನ್​ ವಿಕೆಟ್​ ಕೀಪರ್​-ಬ್ಯಾಟರ್​ ಆಗಿ ಆಡುವುದು ಖಚಿತ. ಆದರೆ ಇಶಾನ್​ ಕಿಶನ್​ ಬ್ಯಾಟಿಂಗ್​ ಕ್ರಮಾಂಕ ಇನ್ನೂ ಸ್ಪಷ್ಟವಾಗಿಲ್ಲ. ಎಡಗೈ ವೇಗಿ ಶಾಹೀನ್​ ಷಾ ಅಫ್ರಿದಿ ದಾಳಿಗೆ ಕೌಂಟರ್​ ನೀಡಲು ಕಿಶನ್​ ಒಬ್ಬರೇ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್​ ಆಗಿದ್ದಾರೆ. ಹೀಗಾಗಿ ಕಿಶನ್​ ಮಧ್ಯಮ ಕ್ರಮಾಂಕಕ್ಕೆ ಬದಲಾಗಿ ಆರಂಭಿಕರಾಗಿ ಆಡಿದರೆ, ರೋಹಿತ್​ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯೂ ಇದೆ. ಸೂರ್ಯಕುಮಾರ್​ ಮತ್ತು ಶಾರ್ದೂಲ್​ ಠಾಕೂರ್​ಗೆ 11ರ ಬಳಗದಲ್ಲಿ ಸ್ಥಾನ ಲಭಿಸುವ ಸಾಧ್ಯತೆಗಳಿಲ್ಲ.

ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್​ (ವಿ.ಕೀ), ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್​ ಯಾದವ್​, ಮೊಹಮದ್​ ಶಮಿ, ಮೊಹಮದ್​ ಸಿರಾಜ್​, ಜಸ್​ಪ್ರೀತ್​ ಬುಮ್ರಾ.

ಪಾಕಿಸ್ತಾನ: ನೇಪಾಳ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆಡಿ ಗೆದ್ದ ತಂಡವನ್ನೇ ಪಾಕಿಸ್ತಾನ, ಭಾರತ ವಿರುದ್ಧದ ಹೈ-ವೋಲ್ಟೇಜ್​ ಪಂದ್ಯಕ್ಕೂ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಯಾವುದೇ ಆಟಗಾರರ ಗಾಯದ ಕಳವಳವನ್ನೂ ಪಾಕಿಸ್ತಾನ ತಂಡ ಹೊಂದಿಲ್ಲ.

ಸಂಭಾವ್ಯ ತಂಡ: ಫಖರ್​ ಜಮಾನ್​, ಇಮಾಮ್​ ಉಲ್​ ಹಕ್​, ಬಾಬರ್​ ಅಜಮ್​, ಮೊಹಮದ್​ ರಿಜ್ವಾನ್​, ಅಘಾ ಸಲ್ಮಾನ್​, ಇಫ್ತಿಕರ್​ ಅಹ್ಮದ್​, ಶಾದಾಬ್​ ಖಾನ್​, ಮೊಹಮದ್​ ನವಾಜ್​, ಶಾಹೀನ್​ ಷಾ ಅಫ್ರಿದಿ, ಹ್ಯಾರಿಸ್​ ರೌಫ್​, ನಸೀಮ್​ ಷಾ.

ಆರಂಭ: ಮಧ್ಯಾಹ್ನ 3.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಮುಖಾಮುಖಿ: 132

ಭಾರತ: 55

ಪಾಕಿಸ್ತಾನ: 73

ರದ್ದು: 4

ಏಕದಿನ ಏಷ್ಯಾಕಪ್​ನಲ್ಲಿ: 13

ಭಾರತ: 7

ಪಾಕಿಸ್ತಾನ: 5

ರದ್ದು: 1

400 ಕೋಟಿ ರೂ. ಮೊತ್ತದ ಪಂದ್ಯ!

ಭಾರತ-ಪಾಕ್​ ಪಂದ್ಯದ ವೇಳೆ ಜಾಹೀರಾತು ಪ್ರಸಾರದಿಂದ ಡಿಸ್ನಿ&ಸ್ಟಾರ್​ ಸಂಸ್ಥೆ ಬರೋಬ್ಬರಿ 400 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ. ಡಿಸ್ನಿ-ಹಾಟ್​ಸ್ಟಾರ್​ ಆ್ಯಪ್​ ಮೂಲಕ ಮೊಬೈಲ್​ಗಳಲ್ಲಿ ಪಂದ್ಯ ಉಚಿತವಾಗಿ ನೇರಪ್ರಸಾರ ಕಾಣಲಿದ್ದು, ಹಲವು ದೊಡ್ಡ ಬ್ರ್ಯಾಂಡ್​ಗಳು ಈಗಾಗಲೆ ಜಾಹೀರಾತು ಸ್ಲಾಟ್​ ಬುಕ್​ ಮಾಡಿಕೊಂಡಿವೆ. ಪಂದ್ಯದ ಪ್ರತಿ 10 ಸೆಕೆಂಡ್​ ಜಾಹೀರಾತು ಸ್ಲಾಟ್​ಗೆ 30 ಲಕ್ಷ ರೂ. ಮೊತ್ತ ನಿಗದಿಯಾಗಿತ್ತು. ಟೂರ್ನಿಯ ಇತರ ಪಂದ್ಯಗಳ 10 ಸೆಕೆಂಡ್​ ಜಾಹೀರಾತು ಸ್ಲಾಟ್​ಗೆ 2-3 ಲಕ್ಷ ರೂ. ಇವೆ.

5 ವರ್ಷಗಳ ಬಳಿಕ ಗಿಲ್​-ಅಫ್ರಿದಿ ಮುಖಾಮುಖಿ!

ಹಾಲಿ ವರ್ಷ ಭಾರತದ ರನ್​ಮೆಷಿನ್​ ಎನಿಸಿರುವ ಯುವ ಆರಂಭಿಕ ಶುಭಮಾನ್​ ಗಿಲ್​ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸೀನಿಯರ್​ ತಂಡವನ್ನು ಎದುರಿಸಲಿದ್ದಾರೆ. ಆದರೆ ಈಗ ಪಾಕಿಸ್ತಾನ ತಂಡದ ಪ್ರಮುಖ ವೇಗಿ ಎನಿಸಿರುವ ಶಾಹೀನ್​ ಷಾ ಅಫ್ರಿದಿ ವಿರುದ್ಧ 5 ವರ್ಷಗಳ ಹಿಂದೆಯೇ ಅವರು ಆಡಿದ್ದಾರೆ! ಅದು 2018ರ 19 ವಯೋಮಿತಿ ವಿಶ್ವಕಪ್​ ಸೆಮಿಫೈನಲ್​ನಲ್ಲಿ. ಆ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ಗಿಲ್​, ಅಫ್ರಿದಿ ಎಸೆತಗಳನ್ನು ದಂಡಿಸಿದ್ದರು. ಇದೀಗ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಾರೆಯರಾಗಿದ್ದು, ಇವರ ಮರುಮುಖಾಮುಖಿ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net