

ಅಹಮದಾಬಾದ್: ನೂತನ ಸ್ಟೇಡಿಯಂನಲ್ಲಿ ಹೊಸ ಸವಾಲಿನೊಂದಿಗೆ ಕಣಕ್ಕಿಳಿದಿರುವ ಭಾರತ ತಂಡ 3ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಮೊದಲ ದಿನದಾಟದಲ್ಲೇ ಮೇಲುಗೈ ಸಾಧಿಸಿದೆ. ಇದಕ್ಕೆ ಕಾರಣವಾಗಿದ್ದು ಸ್ಥಳೀಯ ಪ್ರತಿಭೆ ಅಕ್ಷರ್ ಪಟೇಲ್ (38ಕ್ಕೆ 6) ಮಾರಕ ಸ್ಪಿನ್ ದಾಳಿ ಹಾಗೂ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ (57*ರನ್, 82 ಎಸೆತ, 9 ಬೌಂಡರಿ) ಅರ್ಧಶತಕದಾಟ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಸುತ್ತಿಗೇರಲು ಅವಶ್ಯಕತೆ ಇರುವ ಗೆಲುವಿಗೂ ಭದ್ರ ಬುನಾದಿ ಹಾಕಿಕೊಂಡಿದೆ. ಮೊಟೆರಾದಲ್ಲಿ ಮರುನಾಮಕರಣಗೊಂಡ ನೂತನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 112 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 99 ರನ್ ಪೇರಿಸಿದ್ದು, ಕೇವಲ 13 ರನ್ ಹಿನ್ನಡೆಯಲ್ಲಿದೆ.
ಇದನ್ನೂ ಓದಿ: ಅಭಿಮಾನಿಗಳ ವರ್ತನೆಗೆ ಕ್ಷಮೆ ಕೋರಿದ ಡಿಬಾಸ್
ನಿರಾಸೆ ಮೂಡಿಸಿದ ಪೂಜಾರ-ಗಿಲ್: ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಎಚ್ಚರಿಕೆಯ ಆರಂಭ ಕಂಡಿತು. ರಾತ್ರಿ ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 5 ರನ್ ಪೇರಿಸಿತು. ಬಳಿಕ ರೋಹಿತ್ ಶರ್ಮ ಒಂಟಿ ರನ್‌ಗಳತ್ತ ಗಮನಹರಿಸಿದರೆ, ಶುಭಮಾನ್ ಗಿಲ್ (11 ರನ್, 51ಎಸೆತ, 2 ಬೌಂಡರಿ) ಸಂಪೂರ್ಣ ಮಂದಗತಿಯಾಗಿ ಬ್ಯಾಟ್ ಬೀಸಿದರು. ಎದುರಿಸಿದ 27ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಖಾತೆ ತೆರೆದ ಗಿಲ್, ಎಚ್ಚರಿಕೆ ನಿರ್ವಹಣೆ ನಡುವೆಯೂ ಆರ್ಚರ್ ಎಸೆದ ಬೌನ್ಸಿ ಎಸೆತವನ್ನು ಹೊಡೆಯಲು ಯತ್ನಿಸಿ ಕೈಸುಟ್ಟುಕೊಂಡರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮ ಜತೆಗೂಡಿ 33 ರನ್ ಕಲೆಹಾಕಿದರು. ಬಳಿಕ ಬಂದ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ ಖಾತೆ ತೆರೆಯುವ ಮುನ್ನವೇ ಜಾಕ್ ಲೀಚ್ ಎಸೆತದಲ್ಲಿ ಎಲ್‌ಬಿಯಾದರು. ಪೂಜಾರ ಇನಿಂಗ್ಸ್‌ಗಾಗಿ ಕಾಯುತ್ತಿದ್ದ ತವರು ರಾಜ್ಯದ ಪ್ರೇಕ್ಷಕರು ನಿರಾಸೆ ಅನುಭವಿಸಿದರು.
*ಆಧರಿಸಿದ ರೋಹಿತ್-ಕೊಹ್ಲಿ: ಗಿಲ್ ಹಾಗೂ ಪೂಜಾರ ನಿರ್ಗಮನದ ಬಳಿಕ ಜತೆಯಾದ ರೋಹಿತ್ ಶರ್ಮ ಹಾಗೂ ನಾಯಕ ವಿರಾಟ್ ಕೊಹ್ಲಿ (27 ರನ್, 58 ಎಸೆತ, 3 ಬೌಂಡರಿ) ಜೋಡಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿತು. ರೋಹಿತ್ ಆಕರ್ಷಕ ಬೌಂಡರಿ ಸಿಡಿಸುವ ಮೂಲಕ ಗಮನಸೆಳೆದರು. ರೋಹಿತ್-ಕೊಹ್ಲಿ ಜೋಡಿಯನ್ನು ಬೇರ್ಪಡಿಸಲು ಇಂಗ್ಲೆಂಡ್ ನಾಯಕ ಜೋ ರೂಟ್ ಪದೆ ಪದೇ ಬೌಲರ್‌ಗಳನ್ನು ಬದಲಿಸಿದರೂ ಪ್ರಯೋಜನವಾಗಲಿಲ್ಲ. ಪ್ರವಾಸಿ ಬೌಲರ್‌ಗಳ ಎದುರು ಸವಾರಿ ನಡೆಸಿದ ಈ ಜೋಡಿ 3ನೇ ವಿಕೆಟ್‌ಗೆ 64 ಪೇರಿಸಿದರು. ದಿನದಂತ್ಯಕ್ಕೆ ಲೀಚ್ ಎಸೆತವನ್ನು ಕಟ್ ಮಾಡಲು ಯತ್ನಿಸಿದ ಕೊಹ್ಲಿ ಬೌಲ್ಡ್ ಆದರು.
ಇಂಗ್ಲೆಂಡ್: 112 (ಜಾಕ್ ಕ್ರೌಲಿ 53, ಜೋ ರೂಟ್ 17, ಬೆನ್ ಫೋಕ್ಸ್ 12, ಅಕ್ಷರ್ ಪಟೇಲ್ 38ಕ್ಕೆ 6, ಆರ್.ಅಶ್ವಿನ್ 26ಕ್ಕೆ 3, ಇಶಾಂತ್ ಶರ್ಮ 26ಕ್ಕೆ 1), ಭಾರತ: 33 ಓವರ್‌ಗಳಲ್ಲಿ 3 ವಿಕೆಟ್‌ಗೆ 99 (ರೋಹಿತ್ ಶರ್ಮ 57*, ಶುಭಮಾನ್ ಗಿಲ್ 11, ವಿರಾಟ್ ಕೊಹ್ಲಿ 27, ಜಾಕ್ ಲೀಚ್ 27ಕ್ಕೆ 2, ಜೋಫ್ರಾ ಆರ್ಚರ್ 24ಕ್ಕೆ 1).