ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಟಿ.ನಟರಾಜನ್, ಆಸ್ಟ್ರೇಲಿಯಾ ತಂಡಕ್ಕೆ ಲಬುಶೇನ್ ಆಸರೆ

INDIA AND AUSTRALIA FOR WEB
Published on

ಬ್ರಿಸ್ಬೇನ್: ಭಾರತದ ವೇಗಿಗಳ ದಿಟ್ಟ ನಿರ್ವಹಣೆ ನಡುವೆಯೂ ಮಾರ್ನಸ್ ಲಬುಶೇನ್ (108ರನ್, 204 ಎಸೆತ, 9 ಬೌಂಡರಿ) ಭರ್ಜರಿ ಶತಕದಾಟದಿಂದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು. ಗಾಬಾ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 274 ರನ್ ಪೇರಿಸಿದೆ. ಸರಣಿಯ 3 ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ.

* ಆಸೀಸ್‌ಗೆ ಆರಂಭಿಕ ಆಘಾತ

ತವರು ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವ ಸವಾಲಿನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಡೇವಿಡ್ ವಾರ್ನರ್ (1)ಹಾಗೂ ಮಾರ್ನಸ್ ಹ್ಯಾರಿಸ್ (5) ಕ್ರಮವಾಗಿ ಮೊಹಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ನೀಡಿದರು. ಭರವಸೆಯ ವಾರ್ನರ್ ಸತತ ಮೂರನೇ ಇನಿಂಗ್ಸ್‌ನಲ್ಲೂ ವಿಫಲರಾದರು. ಕೇವಲ 17ರನ್‌ಗಳಿಗೆ ಆರಂಭಿಕರನ್ನು ಕಳೆದುಕೊಂಡ ಆಸೀಸ್ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ವಾರ್ನರ್, ಮೂರನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದರು.

* ಜೀವದಾನದ ಲಾಭ ಪಡೆದ ಲಬುಶೇನ್

ಭಾರತದ ವೇಗಿಗಳ ದಾಳಿಗೆ ತತ್ತರಿಸಿದ್ದ ಆಸೀಸ್ ತಂಡಕ್ಕೆ ಲಬುಶೇನ್ ಹಾಗೂ ಕಳೆದ ಪಂದ್ಯದ ಶತಕ ಸಾಧಕ ಸ್ಟೀವನ್ ಸ್ಮಿತ್ ಜೋಡಿ ಆಸರೆಯಾಯಿತು. ಈ ಜೋಡಿ 3ನೇ ವಿಕೆಟ್‌ಗೆ 70 ರನ್ ಜತೆಯಾಟವಾಡುವ ಮೂಲಕ ಚೇತರಿಕೆ ನೀಡಲು ಯತ್ನಿಸಿತು. ಚೊಚ್ಚಲ ಪಂದ್ಯವಾಡುತ್ತಿರುವ ವಾಷಿಂಗ್ಟನ್ ಸುಂದರ್ ಸ್ಮಿತ್ ವಿಕೆಟ್ ಕಬಳಿಸಿ ಈ ಜೋಡಿ ಬೇರ್ಪಡಿಸಿದರು. ಬಳಿಕ ಲಬುಶೇನ್ ಹಾಗೂ ಮ್ಯಾಥ್ಯೂ ವೇಡ್ (45) ಜೋಡಿ 4ನೇ ವಿಕೆಟ್‌ಗೆ 113 ರನ್ ಪೇರಿಸಿ ಭಾರತಕ್ಕೆ ತಿರುಗೇಟು ನೀಡಲು ಯತ್ನಿಸಿತು. ಭಾರತದ ಫೀಲ್ಡರ್‌ಗಳು ನೀಡಿದ ಜೀವದಾನದ ಲಾಭ ಪಡೆದ ಲಬುಶೇನ್ ಶತಕ ಪೂರೈಸಿಕೊಂಡರು. ಎರಡು ಓವರ್‌ಗಳ ಅಂತರದಲ್ಲಿ ಈ ಜೋಡಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿತು. ಕ್ಯಾಮೆರೊನ್ ಗ್ರೀನ್ ಹಾಗೂ ಟಿಮ್ ಪೇನ್ ಜೋಡಿ ಮುರಿಯದ 6ನೇ ವಿಕೆಟ್‌ಗೆ 61 ರನ್ ಪೇರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

* 2: ವೇಗಿ ಟಿ.ನಟರಾಜನ್ ಹಾಗೂ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇಬ್ಬರು ತಮಿಳುನಾಡು ರಾಜ್ಯದವರು ಎಂಬುದೇ ವಿಶೇಷ.

* 4: ಗಾಯದ ಸಮಸ್ಯೆಯಿಂದ ಬಳಲಿರುವ ಭಾರತ ತಂಡ 4 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಗಾಯಾಳುಗಳಾದ ಆರ್.ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಹೊರಗುಳಿದರೆ, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್ವಾಲ್ ತಂಡಕ್ಕೆ ವಾಪಸಾದರೆ, ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಆಸ್ಟ್ರೇಲಿಯಾ: 5 ವಿಕೆಟ್‌ಗೆ 274 (ಮಾರ್ನಸ್ ಲಬುಶೇನ್ 108, ಸ್ಟೀವನ್ ಸ್ಮಿತ್ 36, ಮ್ಯಾಥ್ಯೂ ವೇಡ್ 45, ಕ್ಯಾಮೆರೊನ್ ಗ್ರೀನ್ 28*, ಟಿಮ್ ಪೇನ್ 38*, ಟಿ.ನಟರಾಜನ್ 63ಕ್ಕೆ 2, ಮೊಹಮದ್ ಸಿರಾಜ್ 51ಕ್ಕೆ 1, ಶಾರ್ದೂಲ್ ಠಾಕೂರ್ 67ಕ್ಕೆ 1, ವಾಷಿಂಗ್ಟನ್ ಸುಂದರ್ 63ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net