

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆ ಮಿತಿಯಲ್ಲಿರಲಿ ಎಂಬ ಆದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿವೆ. ಈ ನಡುವೆ ರಾಷ್ಟ್ರೀಯ ಹಬ್ಬದಲ್ಲೊಂದಾದ ಸ್ವಾತಂತ್ರ್ಯ ದಿನದ ಅದ್ಧೂರಿ ಆಚರಣೆಗೂ ತೊಡಕುಂಟಾಗಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಮಂದಿ ಬಗೆಬಗೆಯ ಫೋಟೋ ಹಂಚಿಕೊಳ್ಳುತ್ತ ಕರೊನಾ ನಡುವೆಯೂ ಕಲರ್ಫುಲ್ ಆಗಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿದ್ದಾರೆ.
ಸ್ಯಾಂಡಲ್ವುಡ್ನ ಬಹುತೇಕ ನಟ-ನಟಿಯರು, 74ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ್ದಾರೆ. ಶಿವರಾಜಕುಮಾರ್, ರಮೇಶ್ ಅರವಿಂದ್, ದರ್ಶನ್, ಪುನೀತ್ ರಾಜಕುಮಾರ್, ಅರ್ಜುನ್ ಸರ್ಜಾ, ಯಶ್, ಶ್ರೀಮುರಳಿ, ಸತೀಶ್ ನೀನಾಸಂ, ಅನುಶ್ರೀ, ಹರ್ಷಿಕಾ ಪೂಣಚ್ಚ, ವೈಷ್ಣವಿ, ನಭಾ ನಟೇಶ್, ಅದಿತಿ ಪ್ರಭುದೇವ, ಸಂಯುಕ್ತಾ ಹೊರನಾಡು ಸೇರಿ ಹಲವರು ಶುಭ ಕೋರುವುದರ ಜತೆಗೆ ಸ್ವಾತಂತ್ರ್ಯ ದಿನದ ಮಹತ್ವವನ್ನೂ ತಿಳಿಸಿದ್ದಾರೆ.
‘ರಾಬರ್ಟ್’ ಚಿತ್ರದ ಪೋಸ್ಟರ್ ಮೂಲಕ ಶುಭ ಕೋರಿರುವ ದರ್ಶನ್, ‘ಆಗಸ್ಟ್ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಎಂದರೆ ಏನು ಎಂದು ಮೊದಲು ತಿಳಿದುಕೊಳ್ಳೋಣ ಎಂದಿರುವ ಉಪೇಂದ್ರ, ‘ಸ್ವಾತಂತ್ರ್ಯ ಎಂದರೆ ನನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು ತಿಳಿದು, ಅದರ ಬಗ್ಗೆ ಚಿಂತಿಸಿ, ನಾಲ್ಕು ಜನರಿಗೆ ತಿಳಿಸಿ, ವಿಚಾರ ಮಾಡಿ, ರ್ಚಚಿಸಿ ಪರಿಹಾರ ಕಂಡುಕೊಳ್ಳುವುದು. ಇದಕ್ಕಾಗಿ ನಾವು ಒಂದು ಅಭಿಯಾನ ಶುರು ಮಾಡೋಣ. ನಮ್ಮ ತೆರಿಗೆ ಹಣದ ಆಯವ್ಯಯದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ತಂದು, ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿಡಿ. ಇದೇ ನಿಜವಾದ ಪ್ರಜಾ ಸ್ವಾತಂತ್ರ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಎರಡು ವಾರಗಳ ಹಿಂದಷ್ಟೇ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೊಷಣೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿಕೊಂಡಿದ್ದವು ಸಿನಿಮಾ ತಂಡಗಳು. ಇದೀಗ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮತ್ತಷ್ಟು ಚಿತ್ರಗಳ ಪೋಸ್ಟರ್ ಬಿಡುಗಡೆಯಾಗಿವೆ.