ಶಾಕ್​ ಆಗಿ ಕ್ರೀಸ್​ ಮೇಲೆ ಕುಳಿತುಬಿಟ್ಟ ಸೂರ್ಯಕುಮಾರ್​ ಯಾದವ್​! ವಿಡಿಯೋ ವೈರಲ್​

Suryakumar Yadav
Published on

ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಅತಿಥೇಯ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಜಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಗೆಲುವಿನೊಂದಿಗೆ ರೋಹಿತ್​ ಪಡೆ ಸೂಪರ್​ 8ಕ್ಕೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲಿ ಹಲವು ಕುತೂಹಲಕಾರಿ ಘಟನೆಗಳು ನಡೆದಿದ್ದು, ಅದರಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಕೋರಿ ಆಂಡರ್ಸನ್ ಬೌಲಿಂಗ್‌ನಲ್ಲಿ ಮಾಡಿದ ಕಸರತ್ತು ಕೂಡ ಒಂದು. ಆ್ಯಂಡರ್ಸನ್ ಎಸೆತದಿಂದ ಯಾದವ್​ ಆಘಾತಕ್ಕೆ ಒಳಗಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್​, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸೂಪರ್ ಫಿಫ್ಟಿ ಬಾರಿಸಿ ರಂಜಿಸಿದರು. ಈ ಪಂದ್ಯದಲ್ಲಿ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಸೂರ್ಯಕುಮಾರ್-ಶಿವಂ ದುಬೆ ಗೆಲುವಿನ ದಡ ಸೇರಿಸಿದರು. ಈ ಪಂದ್ಯದಲ್ಲಿ ಅವರು 49 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಈ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಟೀಮ್​ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಇನಿಂಗ್ಸ್​ನ 12ನೇ ಓವರ್​ನಲ್ಲಿ ಈ ಘಟನೆ ನಡೆದಿದೆ.

12ನೇ ಓವರ್​ನ 4ನೇ ಎಸೆತದಲ್ಲಿ ಕೋರಿ ಆಂಡರ್ಸನ್ ಎಸೆದ ಚೆಂಡ್​ ಪುಟಿದೇಳದೆ ನೇರವಾಗಿ ವಿಕೆಟ್​ನತ್ತ ಧಾವಿಸಿತು. ಅದನ್ನು ಡಿಫೆಂಡ್​ ಮಾಡಲು ಹೋಗಿ ಸೂರ್ಯಕುಮಾರ್​ ಯಾದವ್​ ಕೆಳಗೆ ಕುಸಿದರು. ಈ ವೇಳೆ ಬಹಳ ಅಚ್ಚರಿ ವ್ಯಕ್ತಪಡಿಸುತ್ತಾ ಕ್ರೀಸ್​ ಮೇಲೆಯೇ ಕುಳಿತುಬಿಟ್ಟರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಅಮೆರಿಕಕ್ಕೆ ಮೊದಲ ಎಸೆತದಲ್ಲೇ ಅರ್ಷದೀಪ್ ಸಿಂಗ್ ಆಘಾತ ನೀಡಿದರು. ಆರಂಭಿಕ ಆಟಗಾರ ಜಹಾಂಗೀರ್(0) ಎಲ್ ಬಿ ರೂಪದಲ್ಲಿ ಬಲಿಯಾದರು. ಅದೇ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ಗೌಸ್ (2) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಆ ಬಳಿಕ ಭಾರತದ ಬೌಲರ್‌ಗಳನ್ನು ತಡೆಯಲು ಯಾವ ಬ್ಯಾಟ್ಸ್‌ಮನ್‌ಗಳಿಗೂ ಸಾಧ್ಯವಾಗಲಿಲ್ಲ. ಸ್ಟೀವ್ ಟೇಲರ್ (24) ರನ್‌ಗಳೊಂದಿಗೆ ಇನ್ನಿಂಗ್ಸ್ ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಅಕ್ಷರ್ ಅವರನ್ನು ಉರುಳಿಸಿದರು. ಆ ಬಳಿಕ ಅರ್ಷದೀಪ್ ಹಾಗೂ ಹಾರ್ದಿಕ್ ಪಾಂಡ್ಯ ಅಮೆರಿಕದ ಇನ್ನಿಂಗ್ಸ್ ಅನ್ನು ಹಾಳು ಮಾಡಿದರು. ಎನ್.ಆರ್.ಕುಮಾರ್ (27) ಅಗ್ರ ಸ್ಕೋರರ್ ಆಗಿದ್ದು, ಉಳಿದವರೆಲ್ಲರೂ ಕಡಿಮೆ ರನ್​ಗಳಿಗೆ ಸೀಮಿತರಾದರು.

ಇದರೊಂದಿಗೆ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ಅರ್ಷದೀಪ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪಾಂಡ್ಯ 2 ವಿಕೆಟ್ ಪಡೆದರು. ಆ ಬಳಿಕ 111 ರನ್ ಗಳ ಸುಲಭ ಗುರಿಯನ್ನು ಟೀಮ್​ ಇಂಡಿಯಾ ಕೊಂಚ ಪ್ರಯಾಸದಿಂದ ಮುಟ್ಟಿತು. 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net