

IND vs PAK : ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಭಾಗವಾಗಿ ಭಾನುವಾರ (ಸೆ.21) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಕೊನೆಯವರೆಗೂ ನಡೆದ ರೋಮಾಂಚಕ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್ಗಳಿಂದ ಜಯಗಳಿಸಿತು. ಆದಾಗ್ಯೂ, ಈ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ ಫಖರ್ ಜಮಾನ್ ಔಟ್ ಆದ ರೀತಿ ವಿವಾದಕ್ಕೆ ಗುರಿಯಾಗಿದೆ.
ಪಾಕಿಸ್ತಾನದ ಇನ್ನಿಂಗ್ಸ್ ವೇಳೆ ಫಖರ್ ಜಮಾನ್ ಅವರು 15 ರನ್ ಗಳಿಸಿ ಕ್ರೀಸ್ನಲ್ಲಿದ್ದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಎಸೆದಂತಹ ಚೆಂಡು ಜಮಾನ್ ಬ್ಯಾಟ್ಗೆ ತಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈಗೆ ಹೋಯಿತು. ಇದರಿಂದ ಅವರು ಔಟಾದರು. ಆದರೆ, ಇದೇ ಕ್ಯಾಚ್ನಿಂದ ಭಾರಿ ವಿವಾದ ಭುಗಿಲೆದ್ದಿದೆ. ಅದು ಖಂಡಿತ ಔಟ್ ಅಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಸಂಜು ಸ್ಯಾಮ್ಸನ್ ಕ್ಯಾಚ್ ತೆಗೆದುಕೊಂಡಾಗ ಚೆಂಡು ನೆಲವನ್ನು ಮುಟ್ಟಿ ನಂತರ ಗ್ಲೌಸ್ ಒಳಗೆ ಹೋಯಿತು ಎಂದು ಪಾಕಿಸ್ತಾನ ವಾದಿಸಿದೆ. ಅಂದಹಾಗೆ, ಸಂಜು ಸ್ಯಾಮ್ಸನ್ ಕ್ಯಾಚ್ ತೆಗೆದುಕೊಂಡಾಗ, ಫೀಲ್ಡ್ ಅಂಪೈರ್ ಘಾಜಿ ಸೊಹೈಲ್ ಅದನ್ನು ಔಟ್ ನೀಡಿದರು. ನಂತರ ಫಖರ್ ಜಮಾನ್ ಅವರು ರಿವಿವ್ಯೂ ತೆಗೆದುಕೊಂಡರು.
ಬಳಿಕ ಟಿವಿ ಅಂಪೈರ್, ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಅನ್ನು ಎಲ್ಲ ಆಯಾಮಗಳಿಂದ ಪರೀಕ್ಷಿಸಿ ಔಟ್ ಎಂದು ಘೋಷಿಸಿದರು. ಒಂದು ಕೋನದಿಂದ ಚೆಂಡು ನೆಲದಿಂದ ಪುಟಿದೇಳುವಂತೆ ಕಂಡುಬಂದರೂ, ವಿಕೆಟ್ ಕೀಪರ್ ಬೆರಳು ಚೆಂಡಿನ ಕೆಳಗೆ ಇದ್ದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಪರಿಣಾಮವಾಗಿ, ಫಖರ್ ಜಮಾನ್ ಪೆವಿಲಿಯನ್ಗೆ ಹೋಗಬೇಕಾಯಿತು.
ಇದೀಗ ಪಾಕಿಸ್ತಾನ ಇದನ್ನು ದೊಡ್ಡ ವಿವಾದವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಟಿವಿ ಅಂಪೈರ್ ಫಖರ್ ಜಮಾನ್ ಅವರನ್ನು ಔಟ್ ಎಂದು ಘೋಷಿಸಿದ್ದರಿಂದ ನಾವು ಸೋತೆವು ಎಂಬ ಹೊಸ ವಾದವನ್ನು ಅವರು ಹುಟ್ಟುಹಾಕುತ್ತಿದ್ದಾರೆ. ಫಖರ್ ಜಮಾನ್ ಅವರನ್ನು ಔಟ್ ಎಂದು ಹೇಳಿದ ಟಿವಿ ಅಂಪೈರ್ ನಿರ್ಧಾರ ತಪ್ಪಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟಿವಿ ಅಂಪೈರ್ ವಿರುದ್ಧ ಐಸಿಸಿಗೆ ದೂರು ನೀಡಿದೆ ಎಂದು ವರದಿಯಾಗಿದೆ. ಪಿಸಿಬಿ ವ್ಯವಸ್ಥಾಪಕರು ಟಿವಿ ಅಂಪೈರ್ ವಿರುದ್ಧ ದೂರು ನೀಡಿ ಐಸಿಸಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ನಡೆದ ಪಂದ್ಯದ ನಂತರ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಅವರು ಫಖರ್ ಜಮಾನ್ ಔಟ್ ವಿವಾದದ ಕುರಿತು ಪ್ರತಿಕ್ರಿಯಿಸಿದರು. ವಿಕೆಟ್ ಕೀಪರ್ ಹಿಡಿಯುವ ಮೊದಲೇ ಚೆಂಡು ಬೌನ್ಸ್ ಆದಂತೆ ಭಾಸವಾಗುತ್ತಿದೆ. ಆ ಸಮಯದಲ್ಲಿ ಫಖರ್ ಜಮಾನ್ ಬ್ಯಾಟಿಂಗ್ ವೈಖರಿ ನೋಡಿದರೆ ಅವರು ಇಡೀ ಪವರ್ ಪ್ಲೇ ಆಡಿದಂತೆ ತೋರುತ್ತದೆ. ಫಖರ್ ಜಮಾನ್ ಕ್ರೀಸ್ನಲ್ಲಿದ್ದರೆ, ನಮ್ಮ ಸ್ಕೋರ್ 190 ರಿಂದ 200 ಕ್ಕೆ ಏರುತ್ತಿತ್ತು ಎಂದು ಸಲ್ಮಾನ್ ಅಘಾ ಹೇಳಿದರು. ಅಲ್ಲದೆ, ಫಖರ್ ಜಮಾನ್ ಕ್ರೀಸ್ನಲ್ಲಿದ್ದರೆ, ಪಾಕಿಸ್ತಾನ ಭಾರತದ ವಿರುದ್ಧ ಗೆಲ್ಲುತ್ತಿತ್ತು ಎಂದರು. ಇದೀಗ ಈ ವಿಚಾರದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)