

IAS officer : 25 ವರ್ಷದ ಸುಂದರ ಯುವತಿ ನೇಹಾ ಬ್ಯಾಡ್ವಾಲ್ ಎಂಬಾಕೆಯನ್ನು ಹೊಗಳುವಂತಹ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನೇಹಾರನ್ನು ಇತ್ತೀಚೆಗೆ ಬಾಲಿವುಡ್ ಜಗತ್ತಿಗೆ ಕಾಲಿಟ್ಟ ಹೊಸ ನಟಿ ಎಂದು ಭಾವಿಸುತ್ತಿದ್ದೀರಾ? ನಿಮ್ಮ ಊಹೆ ತಪ್ಪು. ಏಕೆಂದರೆ ನೇಹಾ ನಟಿಯಲ್ಲ, 2022 ರಲ್ಲಿ ನಡೆದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ‍್ಯಾಂಕ್ (ಎಐಆರ್) 569 ರೊಂದಿಗೆ ಉತ್ತೀರ್ಣರಾದವರು ಮತ್ತು ಪ್ರಸ್ತುತ ಗುಜರಾತ್‌ನಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬ್ಯೂಟಿ ವಿತ್ ಬ್ರೈನ್ ಎಂದು ಆಕೆಯನ್ನು ಕೊಂಡಾಡುತ್ತಿದ್ದಾರೆ. ಅಂದಹಾಗೆ, ನೇಹಾ ಅವರ ಯಶಸ್ಸು ಕೇವಲ ಅದೃಷ್ಟದಿಂದ ಬಂದಿದ್ದಲ್ಲ, ವಾಸ್ತವವಾಗಿ, ಆಕೆ ಎಂದಿಗೂ ಅದೃಷ್ಟದ ಹಿಂದೆ ಬೀಳಲೇ ಇಲ್ಲ. ಮೂರು ವರ್ಷಗಳ ಕಾಲ ಶಿಸ್ತುಬದ್ಧ ಮತ್ತು ಸಮರ್ಪಿತ ಅಧ್ಯಯನ ಮಾದರಿಯನ್ನು ನೇಹಾ ಅವಲಂಬಿಸಿದ್ದರು. ಗಮನಾರ್ಹ ಸಂಗತಿ ಏನೆಂದರೆ ಆಕೆ ತನ್ನ ಮೊಬೈಲ್ ಫೋನ್ನಿಂದಲೂ ದೂರವಿದ್ದರು.
ನೇಹಾ ಬ್ಯಾಡ್ವಾಲ್ ರಾಜಸ್ಥಾನದಲ್ಲಿ ಹುಟ್ಟಿ, ಛತ್ತೀಸ್‌ಗಢದ ರಾಯ್‌ಪುರದಲ್ಲಿ ಬೆಳೆದರು. ಯಶಸ್ಸಿಗೂ ಬಹಳ ಹಿಂದೆಯೇ, ನೇಹಾ ಅವರು ವೈಫಲ್ಯದ ಕಹಿ ಉಂಡಿದ್ದರು. ಅದೇ ಕಹಿ ಆಕೆಯನ್ನು ಗಟ್ಟಿ ಮಾಡಿತು. ನೇಹಾ ತನ್ನ 5ನೇ ತರಗತಿಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರು. ಇದರಿಂದ ಸಂಬಂಧಿಕರು ಹಾಗೂ ಸ್ನೇಹಿತರ ಟೀಕೆಗೆ ಗುರಿಯಾದರು. ಆದರೆ, ಎಲ್ಲಿಯೂ ಆಕೆ ಕುಗ್ಗಲಿಲ್ಲ.
ಶೀಘ್ರದಲ್ಲೇ ಆಕೆ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದಳು, ಅಲ್ಲಿ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಂಡ ವಿಧಿಸುತ್ತಿತ್ತು. ಅದೆಲ್ಲವನ್ನು ಎದುರಿಸಿದ ನೇಹಾ, ತುಂಬಾ ಕಷ್ಟಪಟ್ಟು ಕಲಿತಳು ಮತ್ತು ದಿನ ಕಳೆದಂತೆ ತನ್ನ ಭಾಷೆಯನ್ನು ಸುಧಾರಿಸಿಕೊಂಡಳು. ನಾಗರಿಕ ಸೇವಾ ಅಧಿಕಾರಿಯಾಗಿದ್ದ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸುವ ಅವಳ ನಿರ್ಧಾರವೇ ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಳನ್ನು ಪ್ರೇರೇಪಿಸಿತು.
ನೇಹಾ ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ವಿಫಲರಾಗಿದ್ದರು ಆದರೆ, ಚಿಕ್ಕ ವಯಸ್ಸಿನಲ್ಲಿಯೇ ವೈಫಲ್ಯಗಳನ್ನು ಎದುರಿಸಿದ್ದರಿಂದ ಅವಳು ಎಂದಿಗೂ ನಿರುತ್ಸಾಹಗೊಂಡಿರಲಿಲ್ಲ. ಕಠಿಣ ಅಧ್ಯಯನ ಮಾದರಿಯನ್ನು ಅಳವಡಿಸಿಕೊಳ್ಳದ ಹೊರತು ಯಶಸ್ಸು ತನ್ನನ್ನು ತಲುಪುವುದಿಲ್ಲ ಎಂದು ನೇಹಾಗೆ ತಿಳಿದಿತ್ತು. ನಿಜಕ್ಕೂ, ಇದು ಇದು ಒಂದು ತ್ಯಾಗವೇ ಸರಿ. ಅವಳು ದಿನಕ್ಕೆ 17 ರಿಂದ 18 ಗಂಟೆಗಳ ಕಾಲ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರಾರಂಭಿಸಿದರು ಮತ್ತು ಮೂರು ವರ್ಷಗಳ ಕಾಲ ಆಕೆ ತನ್ನ ಫೋನ್ ಅನ್ನು ಮುಟ್ಟಲೇ ಇಲ್ಲ.
‘
ಕೆಲಸದಿಂದ ಹಿಂತಿರುಗಿದ ನಂತರ, ಅವಳ ತಂದೆ ಗಣಿತದಿಂದ ಇತಿಹಾಸದವರೆಗೆ ಅನೇಕ ವಿಷಯಗಳನ್ನು ಹೇಳಿಕೊಡುವ ಮೂಲಕ ಆಕೆ ಸಹಾಯ ಮಾಡುತ್ತಿದ್ದರು. ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲ್ಪಡುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನೇಹಾ ತೇರ್ಗಡೆಯಾದ ಸುಮಾರು ಮೂರು ವರ್ಷಗಳ ನಂತರ ಆಕೆಯ ಕಥೆ ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಪರಿಶ್ರಮ, ದೃಢನಿಶ್ಚಯ ಮತ್ತು ವೈಫಲ್ಯಗಳನ್ನು ನಗುವಿನೊಂದಿಗೆ ನಿಭಾಯಿಸುವ ಆಕೆಯ ಸಾಮರ್ಥ್ಯ ಕೈಹಿಡಿಯಿತು. ಈಕೆಯ ಯಶೋಗಾಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. (ಏಜೆನ್ಸೀಸ್)