ರೋಹಿತ್​, ಗಿಲ್​, ಅಯ್ಯರ್​... ಫೈನಲ್ ಪಂದ್ಯದಲ್ಲೇ ಟೀಮ್ ಇಂಡಿಯಾ ಎಡವಟ್ಟು! | IND vs NZ Final

ವಿಜಯವಾಣಿ - 2025-03-09T193432.019
Published on

IND vs NZ Final: ಇಂದು (ಮಾ.09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ ಪಡೆ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಆಂತೆಯೇ ಬ್ಯಾಟ್ ಮಾಡಿದ ಕಿವೀಸ್ ಪಡೆ 50 ಓವರ್​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡು 251 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿರುವ ಭಾರತ, ಉತ್ತಮ ಕಿಕ್​ಸ್ಟಾರ್ಟ್​ ಪಡೆದುಕೊಂಡಿದೆ.

ಸಿಕ್ಸ್​ ಬಾರಿಸುವ ಮೂಲಕ ಗುರಿಯತ್ತ ಸಾಗಿರುವ ಕ್ಯಾಪ್ಟನ್ ರೋಹಿತ್ ಶರ್ಮ, ಬಹಳ ವೇಗವಾಗಿ ಅರ್ಧ ಶತಕ ಸಿಡಿಸಿದರು. ಶುಭಮನ್​ ಗಿಲ್​ ಜತೆಗೆ ಅಬ್ಬರಿಸಲು ಕ್ರೀಸ್​ಗೆ ಅಂಟಿರುವ ರೋಹಿತ್​, ತಾವು 'ಹಿಟ್​ಮ್ಯಾನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲು ಎದುರುನೋಡುತ್ತಿದ್ದಾರೆ. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಫೀಲ್ಡಿಂಗ್ ಮಾಡಿದ ರೋಹಿತ್ ಶರ್ಮ ಪಡೆ, ಬರೋಬ್ಬರಿ ನಾಲ್ಕು ಕ್ಯಾಚ್​ಗಳನ್ನು ಕೈಚೆಲ್ಲುವ ಮೂಲಕ ಪೈನಲ್ ಪಂದ್ಯದಲ್ಲಿ ತಮ್ಮ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿತು.

ಒಂದು ನಿರ್ಣಾಯಕ ಪಂದ್ಯದಲ್ಲಿ ಎದುರಾಳಿ ತಂಡದ ಬ್ಯಾಟರ್​ಗಳನ್ನು ಅಬ್ಬರಿಸದಂತೆ ಕಟ್ಟಿಹಾಕುವುದು ಎಷ್ಟು ಮುಖ್ಯವೋ ಕ್ಯಾಚ್​ಗಳನ್ನು ಹಿಡಿಯುವುದು ಅಷ್ಟೇ ಮುಖ್ಯ. ಆದರೆ, ತಮ್ಮ ಪಾಲಿಗೆ ಬಂದ ನಾಲ್ಕು ಬಹುಮುಖ್ಯ ಕ್ಯಾಚ್​ಗಳನ್ನು ಶ್ರೇಯಸ್​ ಅಯ್ಯರ್​, ಶುಭಮನ್​ ಗಿಲ್​, ಮೊಹಮ್ಮದ್ ಶಮಿ ಮತ್ತು ರೋಹಿತ್​ ಶರ್ಮ ಕೈಚೆಲ್ಲಿದರು. ಇದು ಕ್ರಿಕೆಟ್​ ಅಭಿಮಾನಿಗಳು ಮಾತ್ರವಲ್ಲದೇ ಟೀಮ್​ ಮ್ಯಾನೇಜ್​ಮೆಂಟ್​ ಬೇಸರಕ್ಕೂ ಕಾರಣವಾಯಿತು. ಅಸಲಿಗೆ ಈ ಪಂದ್ಯದಲ್ಲಿ ಭಾರತ ಗೆದ್ದರೆ ತೊಂದರೆಯಿಲ್ಲ. ಅದೇ ಸೋತರೆ, ಈ ಕ್ಯಾಚ್​ಗಳು ಬಹಳ ದುಬಾರಿಯಾಗಿ ಕಾಡುವುದರಲ್ಲಿ ಅನುಮಾನವೇ ಇಲ್ಲ.

ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು. ಕಿವೀಸ್ ಪಡೆಯ ಬ್ಯಾಟ್ಸ್‌ಮನ್‌ಗಳ ಪೈಕಿ ಡ್ಯಾರಿಲ್ ಮಿಚೆಲ್ (63, 101 ಎಸೆತಗಳಲ್ಲಿ 3 ಬೌಂಡರಿ) ಮತ್ತು ಬ್ರೇಸ್‌ವೆಲ್ (53 ಅಜೇಯ, 40 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌) ಬಾರಿಸಿ ಅರ್ಧಶತಕ ಗಳಿಸಿದರು. ಇನ್ನು ರಚಿನ್ ರವೀಂದ್ರ (37 ರನ್​, 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್) ಮತ್ತು ಗ್ಲೆನ್ ಫಿಲಿಪ್ಸ್ ( 52 ಎಸೆತಗಳಲ್ಲಿ 32 ರನ್​, 2 ಬೌಂಡರಿ, 1 ಸಿಕ್ಸರ್) ಮೂಲಕ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಶ್ರಮಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net