ಉಪ್ಪಿನಂಗಡಿ: ನೇತ್ರಾವತಿ ಅಣೆಕಟ್ಟಿನಲ್ಲಿ ಸಂಗ್ರಹಗೊಂಡಿರುವ ಹಿನ್ನೀರಿಗೆ ಮಾನವನ ತ್ಯಾಜ್ಯ ಹರಿದು ಸೇರುತ್ತಿದ್ದು, ತತ್ ಪರಿಣಾಮ ನದಿಯೇ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಪರಿಸರದಲ್ಲಿ ಡೆಂೆ ಮತ್ತಿತರ ಜ್ವರ ಉಲ್ಬಣಿಸಿದ್ದು, ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಬೇಕೆಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಆಗ್ರಹ ಕೇಳಿ ಬಂತು.
ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಿತಿ ಅಧ್ಯಕ್ಷ ಕೆರೆಮೂಲೆ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಸದಸ್ಯರು ನಾಗರಿಕರ ಆರೋಗ್ಯ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ದಿನನಿತ್ಯ ಜ್ವರದಿಂದ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರು ನಿಲ್ಲಿಸಿ ಹಿನ್ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಸುವ ಕಾರ್ಯ ನಡೆಯುತ್ತಿದೆ. ಆದರೆ ಪಟ್ಟಣದ ಬಹುತೇಕ ವಾಣಿಜ್ಯ ಹಾಗೂ ವಸತಿ ಮಳಿಗೆಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ರೋಗಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ನದಿಗೆ ತ್ಯಾಜ್ಯ ಹರಿದು ಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.
ಪಂಚಾಯಿತಿ ಅಧ್ಯಕ್ಷೆ ಲಲಿತಾ, ನೀರು ಸಮಿತಿ ಉಪಾಧ್ಯಕ್ಷ ಧನಂಜಯ ನಟ್ಟಿಬೈಲು, ಸದಸ್ಯರಾದ ವಿದ್ಯಾಲಕ್ಷ್ಮೀ ಪ್ರಭು, ಉಷಾ ನಾಯ್ಕ, ಇಸ್ಮಾಯಿಲ್ ತಂಗಳ್, ಸಿದ್ದಿಕ್ ಕೆಂಪಿ, ಯಶೋದಾ ಮುರಳಿ, ಜಯಂತ ಪೊರೋಳಿ, ಚಂದ್ರಾವತಿ ಉಪಸ್ಥಿತರಿದ್ದರು.
ಸಂಪರ್ಕ ದುರುಪಯೋಗ ದೂರು
ಕೋಟೆ ಹಿತ್ತಿಲು ಗಾಂಧಿಪಾರ್ಕ್ ಪರಿಸರದಲ್ಲಿ ಮಣ್ಣು ಮಿಶ್ರಿತ ನೀರು ಗ್ರಾಹಕರಿಗೆ ಸರಬರಾಜು ಆಗುತ್ತಿದ್ದು, ಬದಲಿ ವ್ಯವಸ್ಥೆಗೆ ಆಗ್ರಹಿಸಲಾಯಿತು. ಲಕ್ಷ್ಮೀನಗರದಲ್ಲಿ 80ಕ್ಕೂ ಮಿಕ್ಕ ಕುಡಿಯುವ ನೀರು ಬಳಕೆದಾರರಿದ್ದು, ಅವರಿಗೆ ಅಗತ್ಯಕ್ಕೆ ಬೇಕಾಗುವಷ್ಟು ನೀರು ಒದಗಿಸಬೇಕು, ಪಂಚಾಯಿತಿ ಒಣಕಸ ಸಂಗ್ರಹಿಸಬೇಕು, ಹಸಿಕಸವನ್ನು ಆಯಾ ವಾರ್ಡ್ಗಳಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡಿದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು. ವಸತಿ ಸಮುಚ್ಚಯಕ್ಕೆ ಪಂಚಾಯಿತಿಯಿಂದ ನೀಡುವ ಕುಡಿಯುವ ನೀರಿನ ಸಂಪರ್ಕದ ದುರುಪಯೋಗ ದೂರು ಬಗ್ಗೆ ಚರ್ಚೆ, ಕುಡಿಯುವ ನೀರಿನ ದರ ಪರಿಷ್ಕರಣೆಯ ಪ್ರಸ್ತಾಪಕ್ಕೆ ಸದಸ್ಯರ ತೀವ್ರ ವಿರೋಧ, ನೀರಿನ ಸಂಪರ್ಕದ ಮೀಟರ್ ಕೆಟ್ಟರೆ ಗ್ರಾಹಕರೇ ಅದನ್ನು ಸರಿಪಡಿಸಬೇಕು...ಮೊದಲಾದ ವಿಚಾರಗಳು ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತು.