ಬಾರ್ಡರ್​-ಗಾವಸ್ಕರ್​ ಟ್ರೋಫಿ: ಮೊದಲ ಇನ್ನಿಂಗ್ಸ್​ನಲ್ಲೇ ಆಸಿಸ್​ ವಿರುದ್ಧ ಮುಗ್ಗರಿಸಿದ ಭಾರತ: 150 ರನ್​ಗೆ ಆಲೌಟ್​! IND vs AUS

IND vs AUS
Published on

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು (ನ.22) ಪರ್ತ್‌ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 150ರನ್ ಗಳಿಸಲಷ್ಟೇ ಶಕ್ತವಾಯಿತು.

ಆಲ್​ರೌಂಡರ್​ ನಿತೀಶ್ ರೆಡ್ಡಿ, ಇನ್ನಿಂಗ್ಸ್‌ನಲ್ಲಿ 41 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಸ್ಟ್ರೇಲಿಯಾ ಪರವಾಗಿ ಜೋಶ್​ ಹ್ಯಾಸಲ್​ವುಡ್ 4 ವಿಕೆಟ್ ಪಡೆದರು. ಪಂದ್ಯದ ಆರಂಭದಿಂದಲೂ ಆಸ್ಟ್ರೇಲಿಯಾ ತಂಡ ಪ್ರಾಬಲ್ಯ ಸಾಧಿಸಿತು. ಭಾರತದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ಪೆವಿಲಿಯನ್ ತೊರೆದರು. ಇದರ ನಂತರ, ದೇವದತ್ ಪಡಿಕ್ಕಲ್ ಕೂಡ ಶೂನ್ಯಕ್ಕೆ ಔಟಾದರು.

ವಿರಾಟ್ ಕೊಹ್ಲಿ ಕೂಡ ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿದರು. ಊಟದ ವಿರಾಮಕ್ಕೂ ಮೊದಲು, ಕೆಎಲ್ ರಾಹುಲ್ (26) ಅವರು ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿವಾದಾತ್ಮಕವಾಗಿ ಔಟಾದರು. ಭೋಜನ ವಿರಾಮದ ನಂತರ ಮಿಚೆಲ್ ಮಾರ್ಷ್ ಅವರು ಧ್ರುವ್ ಜುರೆಲ್ (11) ಮತ್ತು ವಾಷಿಂಗ್ಟನ್ ಸುಂದರ್ (4) ಅವರನ್ನು ಔಟ್​ ಮಾಡಿದರು.

37 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಿಷಭ್​ ಪಂತ್, ಪ್ಯಾಟ್ ಕಮ್ಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಹರ್ಷಿತ್ ರಾಣ 7 ರನ್ ಗಳಿಸಿ ಔಟಾದರೆ, ನಾಯಕ ಜಸ್ಪ್ರೀತ್ ಬುಮ್ರಾ 8 ರನ್ ಗಳಿಸಿ ಔಟಾದರು. ಜೋಶ್​ ಹ್ಯಾಸಲ್​ವುಡ್ 4 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net