

ನವ ದೆಹಲಿ: ರಾತ್ರಿ ಹೊತ್ತು, ಗಂಡ - ಹೆಂಡಿತಿ, ಪುಟ್ಟ ಮಗಳು ಮನೆಯ ಹಾಲ್ನಲ್ಲಿ ಮಾತಿನಲ್ಲಿ ನಿರತರಾಗಿರುತ್ತಾರೆ. ಅಷ್ಟರಲ್ಲಿ ಬೆಲ್ ಸೌಂಡ್ ಕೇಳಿಸುತ್ತದೆ. ಮನೆಯೊಡತಿ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ಶಾಕ್ ಕಾದಿರುತ್ತದೆ. ಯಾರೋ ನಾಲ್ಕೈದು ಜನ ಮುಸುಕುಧಾರಿಗಳು, ಪಿಸ್ತೂಲು, ಚಾಕು ಹಿಡಿದುಕೊಂಡು ಬೆದರಿಸಿ ಮನೆಯೊಳಗೆ ನುಗ್ಗುತ್ತಾರೆ. ಮನೆ ಮಂದಿ ಪ್ರತಿರೋಧ ತೋರಬಾರದೆಂದು ಕೈಕಾಲು ಕಟ್ಟಿ ಹಾಕುತ್ತಾರೆ.
ಇಂತಹ ದೃಶ್ಯವನ್ನು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ನಮ್ಮಲ್ಲಿ ಈ ಘಟನೆ ನಡೆದರೆ ಹೇಗಿರಬಹುದು ಎಂದು ಯೋಚಿಸಿ ಭಯ ಬಿದ್ದಿದ್ದೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ಯಾವುದೋ ಸಿನಿಮಾದ್ದಲ್ಲ. ನಿಜ ಘಟನೆ.
ಹೌದು, ಡೆಲಿವರಿ ಬಾಯ್ಸ್ ನೆಪದಲ್ಲಿ ನಾಲ್ಕೈದು ಜನ ಬಾಗಿಲು ಬಡಿದಿದ್ದಾರೆ. ಈ ವೇಳೆ ಮಹಿಳೆಯನ್ನು ಬೆದರಿಸಿ ಮನೆಯೊಳಗೆ ಬಂದು, ಪುರುಷನ ಕೈಕಾಲು ಕಟ್ಟಿಹಾಕಿದ್ದಾರೆ. ಭಯಬಿದ್ದ ಮಗು ಮುದುಡಿಕೊಂಡು ಮೂಲೆ ಸೇರಿದೆ.
ಮನೆಯೊಳಗೆ ನುಗ್ಗಿದ ಅಪರಾಧಿಗಳು ಪಿಸ್ತೂಲ್ ಹಾಗೂ ಚಾಕು ತೋರಿಸಿ ಬೆದರಿಸಿದ್ದಾರೆ. ಮುಖ ಕಾಣಬಾರದೆಂದು ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿಕೊಂಡಿದ್ದರು. ನಂತರ ಮನೆಮಂದಿಯನ್ನು ಕೂಡಿ ಹಾಕಿ ದರೋಡೆ ಮಾಡಿದ್ದಾರೆ. ಈ ಕೃತ್ಯ ಮನೆಯೊಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಸ್ತುತ ಬಹುತೇಕ ವಸ್ತುಗಳನ್ನು ಡೋರ್ ಡೆಲಿವರಿ ಮೂಲಕ ಪಡೆಯುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದರ ಮುನ್ಸೂಚನೆ ಅಪಾಯಕಾರಿಯಾಗಿದ್ದು, ಎಲ್ಲರೂ ಎಚ್ಚೆತ್ತಕೊಳ್ಳಬೇಕಿದೆ.