

ಬೆಂಗಳೂರು: ಆದಾಯ ತೆರಿಗೆ ಇನ್ಸ್ಪೆಕ್ಟರ್ವೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮೀಪದ ಹಳಿ ಮೇಲೆ ಮೃತದೇಹ ಪತ್ತೆಯಾಗಿದೆ.
ಉತ್ತರ ಪ್ರದೇಶ ಮೂಲದ ದೇವೇಂದ್ರ ದುಬೆ (40) ಮೃತರು. ದೇವೇಂದ್ರ ಅವರು ಪತ್ನಿ, ಇಬ್ಬರು ಮಕ್ಕಳ ಜತೆ ಯಶವಂತಪುರ ಎಚ್. ಗುರುಮೂರ್ತಿ ಕಾಲನಿಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಪತ್ನಿ ಜತೆ ಜಗಳ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜ. 20ರಂದು ಮನೆಯಿಂದ ಹೊರಹೋಗಿದ್ದ ದೇವೇಂದ್ರ, ವಾಪಸ್ ಬಂದಿರಲಿಲ್ಲ. ಗಾಬರಿಗೊಂಡಿದ್ದ ಪತ್ನಿ ಹಾಗೂ ಕುಟುಂಬದವರು, ಹಲವೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಯಶವಂತಪುರ ಠಾಣೆಗೆ ಜ.23ರಂದು ಪತ್ನಿ ದೂರು ನೀಡಿದ್ದರು. ಅದೇ ದಿನ ಸಂಜೆ ಕೆಎಸ್ಆರ್ ರೈಲು ನಿಲ್ದಾಣ ಸಮೀಪದ ಹಳಿ ಮೇಲೆ ಮೃತದೇಹ ಪತ್ತೆಯಾಗಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಹೀಗಾಗಿ ನಾಪತ್ತೆ ಪ್ರಕರಣಗಳ ಮೊರೆಹೋದ ಪೊಲೀಸರಿಗೆ ಇದು ದೇವೇಂದ್ರ ದುಬೆ ಮೃತದೇಹವೆಂದು ಶಂಕಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ಡೆತ್ನೋಟ್ ಕಳುಹಿಸಿದರು: ದೇವೇಂದ್ರ ಕೌಟುಂಬಿಕ ವಿಚಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಕೆಲ ಅನುಮಾನಗಳಿದ್ದು, ತನಿಖೆ ನಡೆಯಬೇಕಿದೆ. ಇನ್ನು ಜ.20ರಂದು ಪತ್ನಿ ಜತೆ ಜಗಳ ಮಾಡಿದ್ದ ದೇವೇಂದ್ರ, ಅದೇ ದಿನ ಸಂಜೆ 8 ಗಂಟೆ ಸುಮಾರಿಗೆ, ‘ನಾನು ಬದುಕಿರುವುದಿಲ್ಲ. ಸಾಯುತ್ತೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಮೃತದೇಹವನ್ನು ಮಕ್ಕಳಿಗೆ ತೋರಿಸಬೇಡಿ’ ಎಂದು ಬರೆದು ಪತ್ನಿಗೆ ವಾಟ್ಸ್ಆಪ್ ಸಂದೇಶ ಕಳುಹಿಸಿದ್ದರು ಎಂದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.