ಬಾರದ ಆಂಬ್ಯುಲೆನ್ಸ್​… ತಂದೆಯನ್ನು ತಳ್ಳುಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದ 6 ವರ್ಷದ ಬಾಲಕ

Boy Father
Published on

ಭೋಪಾಲ್​: ಆರು ವರ್ಷದ ಬಾಲಕನೊಬ್ಬ ಅನಾರೋಗ್ಯ ಪೀಡಿತ ತನ್ನ ತಂದೆಯನ್ನು ತಳ್ಳುಗಾಡಿಯ ಮೇಲೆ ಮಲಗಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ರಾಜ್ಯದ ಆರೋಗ್ಯ ಮೂಲ ಸೌಕರ್ಯದ ದುರಾವಸ್ಥೆಗೆ ಕನ್ನಡಿ ಹಿಡಿದಂತಿದೆ.

ಟೀ ಶರ್ಟ್​ ಮತ್ತು ಪೌಡರ್​ ಬ್ಲೂ ಡೆನಿಮ್​ ಜೀನ್ಸ್​ ಧರಿಸಿರುವ ಬಾಲಕ, ತಳ್ಳುಗಾಡಿಯನ್ನು ನೂಕುತ್ತಾ ನಿಯಂತ್ರಿಸುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಬಾಲಕನ ತಾಯಿಯು ಕೂಡ ಮತ್ತೊಂದು ತುದಿಯಿಂದ ತಳ್ಳುಗಾಡಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯವಿದ್ದು, ಸುಮಾರು ಮೂರು ಕಿ.ಮೀ ದೂರ ತಾಯಿ-ಮಗ ಗಾಡಿ ನೂಕಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಮಧ್ಯ ಪ್ರದೇಶ ಸಿಂಗ್ರೌಲಿ ಪಟ್ಟಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸಾಕಷ್ಟು ನೆಟ್ಟಿಗರು ಅಲ್ಲಿನ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬಾಲಕನ ಕುಟುಂಬ ಇದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್​ಗೆಂದು ಕರೆ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಸುಮಾರು 20 ನಿಮಿಷದವರೆಗೆ ಕಾದಿದ್ದಾರೆ. ಆದರೆ, ಯಾವುದೇ ಪ್ರಯೋಜನಾ ಇಲ್ಲ ಅಂತಾ ಗೊತ್ತಾದಾಗ ತಳ್ಳುಗಾಡಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ತೀರ್ಮಾನಿಸಿತು.

ವೈರಲ್​ ವಿಡಿಯೋ ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು, ತನಿಖೆಗೆ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net