ದಶಪಥ ಹೆದ್ದಾರಿ, ಪ್ರಧಾನಿ ಮೋದಿ ಶಹಬಾಸ್​ಗಿರಿ; ಸಿಎಂ ಬೊಮ್ಮಾಯಿ ಟ್ವೀಟ್​ಗೆ ಪ್ರತಿಕ್ರಿಯೆ, ಡಬಲ್ ಎಂಜಿನ್ ಸರ್ಕಾರದ ಚಮತ್ಕಾರ ಎಂದು ಬಣ್ಣನೆ

Mysore express way
Published on

ಬೆಂಗಳೂರು: ವಂದೇ ಭಾರತ್ ಎಕ್ಸ್​ಪ್ರೆಸ್ ಹಾಗೂ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ವಿಡಿಯೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಬೆಳವಣಿಗೆಯ ಅದ್ಭುತ ದೃಶ್ಯ. ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಚಮತ್ಕಾರ ಮಾಡಿದೆ’ ಎಂದು ಸಿಎಂ ಬೊಮ್ಮಾಯಿ ಉಲ್ಲೇಖಿಸಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ‘ನಮ್ಮ ಜನ ಅತ್ಯುತ್ತಮ ಮೂಲಸೌಕರ್ಯಕ್ಕೆ ಅರ್ಹರಿದ್ದಾರೆ. ಮೂಲ ಸವಲತ್ತು ಅಭಿವೃದ್ಧಿಯಲ್ಲಿ ನಮ್ಮ ಕೆಲಸ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದಿದ್ದಾರೆ.

ದಾಖಲೆಯ ಹರ್ಷ: ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆ ಚೇತರಿಕೆ ಹಾಗೂ ತೆರಿಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಜಿಎಸ್​ಟಿ ಸಂಗ್ರಹದಲ್ಲಿ ರಾಜ್ಯ ದಾಖಲೆ ಬರೆದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸಂದೇಶ ಹಂಚಿಕೊಂಡಿರುವ ಅವರು, ಜನವರಿಯಲ್ಲಿ 6,085 ಕೋಟಿ ರೂ. ರಾಜ್ಯದ ಖಜಾನೆಗೆ ಬಂದಿದೆ. ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಶೇ.30ರಷ್ಟು ಬೆಳವಣಿಗೆ ಪ್ರಮಾಣವನ್ನು ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. ಈ ವರ್ಷ ಉತ್ತಮ ಆಯವ್ಯಯ ಮಂಡಿಸಲು ಅನುವು ಮಾಡಿಕೊಡಲಿದೆ ಎಂದು ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ 11,317 ಕೋಟಿ ರೂ. ಸಂಗ್ರಹ: ಮೂಲಗಳ ಪ್ರಕಾರ, ಜನವರಿಯಲ್ಲಿ ಜಿಎಸ್​ಟಿ 11,317 ಕೋಟಿ ರೂ. ಸೇರಿ ಒಟ್ಟಾರೆ ವಾಣಿಜ್ಯ ತೆರಿಗೆ ಸಂಗ್ರಹ 13,141 ಕೋಟಿ ರೂ.ಗಳಿಗೇರಿದೆ. ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿ ಶೇಖರಣೆಯಲ್ಲಿ ಹೊಸ ಸಾಧನೆಯಾಗಿದೆ. ಜಿಎಸ್​ಟಿ, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆಯನ್ನೂ ವಾಣಿಜ್ಯ ತೆರಿಗೆ ಒಳಗೊಂಡಿದೆ. ಒಟ್ಟು 11,317 ಕೋಟಿ ರೂ. ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿ 3,280.8 ಕೋಟಿ ರೂ., ಐಜಿಎಸ್​ಟಿ ಇತ್ಯರ್ಥ ರೂಪದಲ್ಲಿ ರಾಜ್ಯದ ಪಾಲು 2,795.6 ಕೋಟಿ ಒಳಗೊಂಡು ರಾಜ್ಯದ ಬೊಕ್ಕಸಕ್ಕೆ 6,085.40 ಕೋಟಿ ರೂ. ಜಮೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net