

ಬೆಳ್ತಂಗಡಿ: ಪರಿಣತಿ ಮತ್ತು ಅನುಭವದೊಂದಿಗೆ ಗ್ರಾಹಕರಿಗೆ ಸೌಜನ್ಯಪೂರ್ಣ ಸೇವೆ ನೀಡಿದಲ್ಲಿ ವ್ಯವಹಾರದಲ್ಲಿ ಉನ್ನತ ಪ್ರಗತಿ ಸಾಧಿಸಬಹುದು ಎಂದು ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಎ.ವಿ.ಶೆಟ್ಟಿ ಹೇಳಿದರು.
ಶುಕ್ರವಾರ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಉಜಿರೆಯ ವಿನೋದ್ ಕುಮಾರ್ ಮತ್ತು ಆದರ್ಶ ಮಾಲೀಕತ್ವದ ಸುನಿಲ್ ರೆಡಿವೇರ್ಸ್ ಮಳಿಗೆಯನ್ನು ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ ಮಾತನಾಡಿ, ವಿನೋದ್ ಕುಮಾರ್ ಕುಟುಂಬಸ್ಥರು ವ್ಯವಹಾರದಲ್ಲಿ ಅನುಭವ ಹೊಂದಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಮಳಿಗೆಯ ಎದುರುಗಡೆ ಮೂರು ಕಲ್ಯಾಣ ಮಂಟಪ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು, ಅಲ್ಲಿಗೆ ಬರುವ ಯಾತ್ರಿಗಳಿಗೆ ಈ ಮಳಿಗೆಯಿಂದ ಅನುಕೂಲವಾಗಲಿದೆ. ನೂತನ ಮಳಿಗೆ ಬೆಳಗಲಿ ಎಂದರು.
ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ನಿವೃತ್ತ ಅಂಚೆ ಅಧಿಕಾರಿ ಶ್ರೀಧರ್, ಡಾ.ಮೃಣಾಲಿನಿ, ನಿವೃತ್ತ ಮುಖ್ಯಶಿಕ್ಷಕಿ ಕಲಾವತಿ ಉಜಿರೆ ಶುಭ ಹಾರೈಸಿದರು. ಸುನೀಲ್ ಬೇಕಲ್, ಮಾಲೀಕರಾದ ವಿನೋದ್ ಕುಮಾರ್ ಮತ್ತು ಆದರ್ಶ ಕೆ.ಜೆ. ಉಪಸ್ಥಿತರಿದ್ದರು. ಪವಿತ್ರಾ ಸುನೀಲ್ ಧರ್ಮಸ್ಥಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.