ಮಂಗಳೂರು: ಪುಸ್ತಕ ಓದುವ ಅಭಿರುಚಿ ನಮ್ಮಲ್ಲಿ ಹೆಚ್ಚಾಗಬೇಕು. ಪ್ರೇಮಿಗಳ ದಿನಾಚರಣೆ ನಮ್ಮ ಸಂಸ್ಕೃತಿ ಅಲ್ಲ. ಜ್ಞಾನದ ಸಂಸ್ಕೃತಿ ವಿಸ್ತಾರವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಪುರಭವನದಲ್ಲಿ ರಂಗ ಸಂಗಾತಿ ಪ್ರತಿಷ್ಠಾನದ ವತಿಯಿಂದ 10 ಹೊಸ ಪುಸ್ತಕಗಳ ಬಿಡುಗಡೆ ಹಾಗೂ ಪುಸ್ತಕದ ಅವಲೋಕನ ನಡೆಸುವ ಮೂಲಕ ಪುಸ್ತಕ ಪ್ರೇಮಿಗಳ ದಿನವನ್ನಾಗಿ ಆಚರಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವ ಅನುಭವ ವ್ಯಕ್ತಿಗೆ ದಾರಿ ತೋರಿದರೆ ಪರಾನುಭವ ಇದ್ದರೆ ಬದುಕು ಇನ್ನಷ್ಟು ವಿಸ್ತಾರದ ಸ್ವರೂಪ ಪಡೆಯಲು ಸಾಧ್ಯ. ಬರವಣಿಗೆ ಮತ್ತು ಪುಸ್ತಕ ಓದುವ ಮೂಲಕ ಪರಾನುಭವ ಪಡೆದುಕೊಳ್ಳಬಹುದು’ ಎಂದರು.
ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ದೂರುಗಳ ನಡುವೆಯೂ, ಸಹಸ್ರಾರು ಪುಸ್ತಕಗಳು ನಿತ್ಯ ಪ್ರಕಟವಾಗುತ್ತಿರುವುದನ್ನು ಕಾಣುವಾಗ ಪುಸ್ತಕ ಲೋಕದಲ್ಲಿ ಆಶಾದಾಯಕ ವಾತಾವರಣ ಕಾಣಲು ಸಾಧ್ಯ ಎಂದರು.
ಚಹಾ ಅಂಗಡಿಯಲ್ಲೇ 10 ಸಾವಿರ ಪುಸ್ತಕಗಳ ಲೈಬ್ರೆರಿ ಮಾಡಿರುವ ಅಪರೂಪದ ಪುಸ್ತಕ ಪ್ರೇಮಿ ಉದ್ಯಾವರ ಮಾಡದ ಸುರೇಂದ್ರ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ, ಜಾನಪದ ವಿದ್ವಾಂಸರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್, ಚಿತ್ರ ಕಲಾವಿದ ಜಾನ್‌ಚಂದ್ರನ್ ಮುಖ್ಯ ಅತಿಥಿಗಳಾಗಿದ್ದರು. ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
ಹೊಸ ಜಗತ್ತು ಅರಿಯುವ ಶಕ್ತಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುಸ್ತಕ ಓದುವ ಮೂಲಕ ಹೊಸ ಜಗತ್ತನ್ನು ತಿಳಿದುಕೊಳ್ಳುವ ದೊಡ್ಡ ಶಕ್ತಿ ಇದೆ. ಯಾವುದೋ ಒಂದು ಪ್ರದೇಶ, ಅಲ್ಲಿನ ಸ್ಥಿತಿಗತಿಯನ್ನು ಅಲ್ಲಿಗೆ ಹೋಗಿಯೇ ತಿಳಿದುಕೊಳ್ಳಬೇಕಿಲ್ಲ. ಪುಸ್ತಕ ಓದುವ ಮೂಲಕವೇ ಆ ವಾತಾವರಣವನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಮಂಗಳೂರು ವಿವಿಧ ವಿಚಾರದಲ್ಲಿ ಜಗತ್ತಿಗೆ ಮಾಡೆಲ್ ಆಗಿದೆ. ಇದೀಗ ಪ್ರೇಮಿಗಳ ದಿನವನ್ನು ಪುಸ್ತಕ ಪ್ರೇಮಿಗಳ ದಿನವನ್ನಾಗಿ ಬದಲಾಯಿಸುವ ಮೂಲಕ ಜಗತ್ತಿಗೆ ಒಂದು ಮಾಡೆಲ್ ಪರಿಚಯಿಸಿದಂತಾಗಿದೆ ಎಂದರು.
ನಾನು ಸೈನ್ಯಕ್ಕೆ ಸೇರುವ ಸಂದರ್ಭ ಪುಸ್ತಕ ಓದುವ ಮೂಲಕ ಅದರ ಅವಲೋಕನ ನಡೆಸಬೇಕಿತ್ತು. ಆ ಕಾರಣದಿಂದ ಪುಸ್ತಕ ಓದುವುದನ್ನು ಒತ್ತಾಯದ ಮೂಲಕ ಕರಗತಗೊಳಿಸಿದ ಪರಿಣಾಮ ಈಗ ಪುಸ್ತಕ ಓದುವ ಪ್ರೀತಿ ನನ್ನಲ್ಲಿ ಬೆಳೆದಿದೆ. ಕಲೆ, ಸಂಸ್ಕೃತಿ, ಸಾಹಿತ್ಯದ ಆಸಕ್ತಿ ಇಲ್ಲವಾದರೆ ಅದು ಸ್ವಸ್ಥ ಸಮಾಜವಾಗಲು ಸಾಧ್ಯವಿಲ್ಲ.
ಹತ್ತು ಕೃತಿಗಳ ಅನಾವರಣ
ಡಾ.ವಿಶ್ವನಾಥ ಬದಿಕಾನ ಅವರ ‘ಕರ್ನಾಟಕ ಜಾನಪದ ಅಧ್ಯಯನದ ಮೊದಲ ಹೆಜ್ಜೆ’ ಜನಪದ ಅಧ್ಯಯನ ಗ್ರಂಥ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’; ಕನ್ನಡ ಕವನ ಸಂಕಲನ, ಅಕ್ಷತರಾಜ್ ಪೆರ್ಲ ಅವರ ‘ನೆಲ ಉರುಳು’ ಕನ್ನಡ ನಾಟಕ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ‘ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನ ಸಂಕಲನ, ಕರುಣಾಕರ ಬಳ್ಕೂರು ಅವರ ‘ಬೆಳಕು’ ಕನ್ನಡ ಕವನ ಸಂಕಲನ, ಡಾ.ಎಸ್.ಎಂ. ಶಿವಪ್ರಕಾಶ್ ಅವರ ‘ಟೆಕ್ನಾಲಜಿ ವರ್ಸಸ್ ಇಕಾಲಜಿ’ ಕನ್ನಡ ಇಂಗ್ಲಿಷ್ ಕವನ, ರಘು ಇಡ್ಕಿದು ಅವರ ‘ಪೊನ್ನಂದಣ’ ಕನ್ನಡ ಕೃತಿ ವಿಮರ್ಶೆ, ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರ ‘ಕಾತೀಶ್ವರ ವಚನಗಳು’ ಕನ್ನಡ ವಚನ, ಪ್ರೊ.ಅಕ್ಷಯ ಶೆಟ್ಟಿ ಅವರ ‘ಅವಳೆಂದರೆ ಬರೀ ಹೆಣ್ಣೆ’ ಕನ್ನಡ ಕಥಾ ಸಂಕಲನ ಹಾಗೂ ಪ್ರಕಾಶ್ ವಿ.ಎನ್ ಅವರ ‘ನಮ್ಮವನು ಶ್ರೀ ರಾಮಚಂದ್ರ’ ಕನ್ನಡ ನಾಟಕ ಬಿಡುಗಡೆಗೊಂಡಿತು.