

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ನೂತನ ಸಭಾಭವನ ನಿರ್ಮಾಣ ಸಮಿತಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ವಿಶ್ವಕರ್ಮ ಸಭಾಭವನದ ಲೋಕಾರ್ಪಣೆ ಸಮಾರಂಭ ಅ.20ರಂದು ನೆರವೇರಲಿದೆ.
2015ರಲ್ಲಿ ಆಗಿನ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆಯಲ್ಲಿ ನಡೆದ ಭೂವರಾಹ ಯಜ್ಞದಂದು ಜಗದ್ಗುರು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಭೂಮಿ ಪೂಜೆ ನಡೆಸಿದ್ದರು.
ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಿಸಿದ ಈ ಸಭಾಭವನ 15 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಬಾಲ್ಕನಿ ಸಹಿತ 1 ಸಾವಿರ ಮಂದಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, 5 ಸಾವಿರ ಚದರ ಅಡಿಯ ಭೋಜನಾಲಯ, ಪ್ರತ್ಯೇಕ ಸ್ಟೋರ್ ರೂಂ, ಅಡುಗೆ ಸಾಮಗ್ರಿಗಳ ಕೊಠಡಿ, 40 ಕೆವಿ ಜನರೇಟರ್, 350 ಚದರ ಅಡಿಯ ವಧು-ವರರ ಕೊಠಡಿ ನಿರ್ಮಿಸಲಾಗಿದೆ. 5 ಅತಿಥಿ ಗೃಹಗಳನ್ನು ಹೊಂದಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಗುರುಗಳಿಗೆ ತಂಗಲು ಪ್ರತ್ಯೇಕ ಗುರುಧ್ಯಾನ ಮಂದಿರ ನಿರ್ಮಿಸಲಾಗಿದೆ. ಜತೆಗೆ ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿದೆ.
ಅ.20ರಂದು ಬೆಳಗ್ಗೆ 7.30ಕ್ಕೆ ಶ್ರೀ ವಿಶ್ವಕರ್ಮ ಯಜ್ಞ, ಮಹಾಪೂಜೆ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಜಗದ್ಗುರು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಅರಕಲಗೂಡು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ಪುರೋಹಿತ ಎನ್.ಜಯಕರ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಭಾಭವನ ನಿರ್ಮಾಣದ ನೇತೃತ್ವ ವಹಿಸಿರುವ ಪುರೋಹಿತ ಎನ್.ಜಯಕರ ಆಚಾರ್ಯ, ಕಟ್ಟಡದ ಸಿವಿಲ್ ಇಂಜಿನಿಯರ್ ಬೆಳುವಾಯಿ ಸುಂದರ ಜಿ.ಆಚಾರ್ಯ, ಪ್ರಮುಖ ದಾನಿ ಉಜಿರೆ ಆನಂದ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು ಹಾಗೂ ದಾನಿಗಳನ್ನು ಗೌರವಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ನಡೆಯಲಿದೆ ಎಂದು ಸಭಾಭವನ ನಿರ್ಮಾಣ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.