ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮಿಗಿಲಾಗಿ ಸಹಕಾರಿ ಕ್ಷೇತ್ರ ಕೆಲಸ ಮಾಡುತ್ತಿದೆ. ಇದರಿಂದಾಗಿ ಜನರಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ ಇದೆ. ನಮ್ಮ ಜಿಲ್ಲೆ ವಾಣಿಜ್ಯ ಬ್ಯಾಂಕ್‌ಗಳ ತವರೂರಾದರೂ ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡು ಸಂಕುಚಿಗೊಂಡಿದೆ. ಸಿಬ್ಬಂದಿಗೆ ಸ್ಥಳೀಯ ಭಾಷೆಗಳು ತಿಳಿಯದೆ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸಹಕಾರಿ ಸಂಘಗಳು ಜನರ ಸೇವೆಗೆ ವಿಕಸಿತಗೊಂಡು ಗ್ರಾಹಕರ ಬೇಕು ಬೇಡಗಳನ್ನು ಈಡೇರಿಸುತ್ತಿವೆ. ಗ್ರಾಹಕರಿಗೆ ಅರ್ಧ ದಿವಸದಲ್ಲಿ ಸಾಲ ಸಿಗುವ ವ್ಯವಸ್ಥೆ ಸಹಕಾರಿ ಸಂಘಗಳಲ್ಲಿದೆ. ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಜನರ ಸಂಸ್ಥೆಯಾಗಿ ಮಾರ್ಪಡಾಗಿದೆ. ಕೇಂದ್ರ ಸಹಕಾರಿ ಬ್ಯಾಂಕಿನಿಂದ 10 ಲಕ್ಷ ರೂ.ನೆರವು ನೀಡುವುದಾಗಿ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಗ್ಗ ನೂತನ ಕಟ್ಟಡ ಸಮೃದ್ಧಿ ಸಹಕಾರ ಸೌಧ ಉದ್ಘಾಟನಾ ಸಮಾರಂಭ ದಲ್ಲಿ ಶನಿವಾರ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಸದಸ್ಯ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಸುಂದರವಾದ ಕಟ್ಟಡ ನಿರ್ಮಾಣಗೊಂಡಿದೆ. ಗ್ರಾಹಕರು ಹಾಗೂ ಸದಸ್ಯರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವ ಬದ್ಧತೆ ನಮ್ಮಲ್ಲಿದೆ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಮ ಭಟ್, ಕಾವಳಪಡೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಬಂಟ್ವಾಳ ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ, ಉಪಾಧ್ಯಕ್ಷ ಅಮ್ಮು ರೈ, ನಿರ್ದೇಶಕರಾದ ಪಿ.ಜಿನರಾಜ ಆರಿಗ, ಕೆ.ಚಂದಪ್ಪ ಪೂಜಾರಿ, ಬೆನಡಿಕ್ಟ್ ಡಿಸೋಜ, ಬಿ.ಶಿವಪ್ರಸಾದ್, ಸವಿತಾ ಬಿ.ಎಸ್., ಆಶಾ, ಪ್ರಕಾಶ್ ಶೆಟ್ಟಿ, ನವೀನ್ ಶೆಟ್ಟಿ, ಚಂದಪ್ಪ ಮೂಲ್ಯ, ರಾಜು, ಬಾಲಕೃಷ್ಣ ನಾಯ್ಕ, ಗಂಗಾಧರ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕಿನ ಬಂಟ್ವಾಳ ವಲಯ ಮೇಲ್ವಿಚಾರಕ ಕೀರ್ತಿರಾಜ್ ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವನಂದ ಗಟ್ಟಿ ವಂದಿಸಿದರು, ಭಾಗ್ಯರಾಜ್ ನಿರೂಪಿಸಿದರು.
ಸಹಕಾರಿ ಸಂಘ ಸಮಾಜದ ಅಶಕ್ತರ ಕೊಂಡಿಯಾಗಿ ಕೆಲಸ ಮಾಡಬೇಕು, ಅಗತ್ಯ ಇರುವವರಿಗೆ ಬೇಕಾದ ಒಂದು ಯೋಜನೆ ಪ್ರತಿ ವರ್ಷ ಅನುಷ್ಠಾನಗೊಳಿಸಿದರೆ ಅದು ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಲಿದೆ.
ಬ್ರಿಜೇಶ್ ಚೌಟ, ಸಂಸದ
ಕಾಡಬೆಟ್ಟು ನಾರಾಯಣ ರೈ ಅವರು ರಾಷ್ಟ್ರೀಯ ಚಿಂತನೆ ಇಟ್ಟುಕೊಂಡು ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಸಹಕಾರಿ ಕ್ಷೇತ್ರ ಆಯ್ದುಕೊಂಡರು. ಸಹಕಾರಿ ಕ್ಷೇತ್ರ ಜನರು, ಜನರಿಂದ, ಜನರಿಗಾಗಿ ಇರುವ ವೈಶಿಷ್ಟೃ ಕ್ಷೇತ್ರ.
ಡಾ.ಪ್ರಭಾಕರ ಭಟ್, ಅಧ್ಯಕ್ಷ
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ
ಸನ್ಮಾನ, ಕಂಪ್ಯೂಟರ್ ಹಸ್ತಾಂತರ
ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಪಿ.ಜಿನರಾಜ ಆರಿಗ, ಉಪಾಧ್ಯಕ್ಷ ಅಮ್ಮು ರೈ, ಮಾಜಿ ನಿರ್ದೇಶಕ ಪೋಂಕ್ರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹಾಗೂ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಾನಂದ ಗಟ್ಟಿ ಅವರನ್ನು ನಿರ್ದೇಶಕರ ಪರವಾಗಿ ಗೌರವಿಸಲಾಯಿತು. ಗುತ್ತಿಗೆದಾರ ದಿನೇಶ್ ರೈ, ಇಂಜಿನಿಯರ್ ರಾಮ್ ಪ್ರಸಾದ್ ಕೊಂಬಿಲ, ಇಲೆಕ್ಟ್ರಿಷಿಯನ್ ನವೀನ್ ಪೂಜಾರಿ ಬೊಲ್ಲುಟ್ಟು ಅವರನ್ನು ಸನ್ಮಾನಿಸಲಾಯಿತು. ಎರಡು ಸ್ವಸಹಾಯ ಸಂಘಗಳಿಗೆ ಚಾಲನೆ ನೀಡಲಾಯಿತು. ಚೈತನ್ಯ ಆರೋಗ್ಯ ವಿಮೆ ಚೆಕ್ ವಿತರಿಸಲಾಯಿತು. ಸಂಘದ ಕಾರ್ಯ ವ್ಯಾಪ್ತಿಯ 8 ಶಾಲೆಗಳಿಗೆ ಕಂಪ್ಯೂಟರ್ ಹಸ್ತಾಂತರಿಸಲಾಯಿತು.