

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸಹಕಾರಿ ರಂಗದಲ್ಲೇ ದಾಖಲೆಯ 16ನೇ ವರ್ಷದಲ್ಲೂ ಶೇ.25 ಡಿವಿಡೆಂಡನ್ನು ತನ್ನ ಷೇರುದಾರರಿಗೆ ಘೋಷಿಸಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ 2023-24ನೇ ಸಾಲಿಗೆ ವಾರ್ಷಿಕ 1.67ಕೋಟಿ ರೂ. ವ್ಯವಹಾರಿಕ ಲಾಭ ದಾಖಲಿಸಿರುವುದಾಗಿ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಹೇಳಿದರು.
ಶುಕ್ರವಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಶೇ.96 ಸಾಲ ವಸೂಲಾತಿಯಾಗಿದ್ದು, ಜಿಲ್ಲೆಯಲ್ಲಿನ ಮುಂಚೂಣಿ ಸಹಕಾರಿ ಸಂಘ ನಮ್ಮದಾಗಿದೆ. 1.5 ಕೋಟಿ ರೂ.ವೆಚ್ಚದಲ್ಲಿ ಸಂಘದ ಪಲಿಮಾರಿನ ಹವಾನಿಯಂತ್ರಿತ ಶಾಖಾ ಸ್ವಂತ ಕಟ್ಟಡ ಸೆ.9ರಂದು ಉದ್ಘಾಟಿಸಲಾಗುವುದು ಎಂದರು.
ನಿರ್ದೇಶಕರಾದ ವೈ.ಜಿ.ರಸೂಲ್, ಶಿವರಾಮ ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ.ಬಿ., ರಾಜಾರಾಮ ರಾವ್, ಮಾಧವ ಆಚಾರ್ಯ, ಸ್ಟಾೃನಿ ಕ್ವಾಡ್ರಸ್, ಸುಚರಿತಾ ಎಲ್.ಅಮೀನ್, ಕಾಂಚನ, ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ವರದಿ ವಾಚಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.
ಪಲಿಮಾರು ಸ್ಮಶಾನ ಅಭಿವೃದ್ಧಿಗಾಗಿ 3.5 ಲಕ್ಷ ರೂ. ನೀಡಲಾಗಿದೆ. ಪಡುಬಿದ್ರಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಘದ ಸಿಬ್ಬಂದಿಗೆ ಎರಡು ತಿಂಗಳ ಬೋನಸ್ ನೀಡಲಾಗುವುದು.-ವೈ.ಸುಧೀರ್ ಕುಮಾರ್