ವಚನಕಾರರಿಂದ ಪರಿಶುದ್ಧ ಸಮಾಜ ನಿರ್ಮಾಣ

Published on

ಪಡುಬಿದ್ರಿ: ವಚನ ಸಾಹಿತ್ಯ ಇಂದಿಗೂ ಅತ್ಯಂತ ಪ್ರಸ್ತುತವಾದುದು. ಸಮಾಜದ ದೋಷಗಳನ್ನು ತಿದ್ದುವ ಪರಿಶುದ್ಧ ಸಮಾಜ ನಿರ್ಮಾಣ ಮಾಡುವ ಆಶಯ ವಚನಕಾರರು ಹೊಂದಿದ್ದರು ಎಂದು ಕಾಪು ತಾಲೂಕಿನ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗಿರೀಶ ಕುಮಾರ್ ಹೇಳಿದರು.

ವಚನ ಸಾಹಿತ್ಯ ಮತ್ತು ಗಮಕ ಕಲೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮತ್ತು ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಸಹಯೋಗದಲ್ಲಿ ಪಡುಬಿದ್ರಿಯಲ್ಲಿ ‘ವಚನ ಸಾಹಿತ್ಯದ ಸೊಗ’ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ವಿದ್ವಾನ್ ಶಂಭು ಭಟ್ಟರು ಹಲವು ವಚನಕಾರರ ವಿಶಿಷ್ಟ ವಚನಗಳನ್ನು ಪ್ರಸ್ತುತಪಡಿಸಿದರು. ವ್ಯಾಖ್ಯಾನಕಾರ ರಾಘವೇಂದ್ರ ರಾವ್ ವಿವಿಧ ದೃಷ್ಟಾಂತಗಳ ಮೂಲಕ ವಚನಗಳ ಸ್ವಾರಸ್ಯ ನಿರೂಪಿಸಿದರು. ಸಂಗೀತ ವಿದ್ವಾನ್ ಶಂಭು ಭಟ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶಿಲ್ಪಾ ಕೆ.ಆರ್. ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

ವಚನ ಸಾಹಿತ್ಯದ ಸೊಬಗು ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಸ್ವಾತಿ, ವಿದ್ಯಾರ್ಥಿನಿ ಭೂಮಿಕಾ ರಾವ್ ವಚನ ಹಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಅನುರಾಧಾ ಪಿ.ಎಸ್. ಸ್ವಾಗತಿಸಿದರು. ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಅಶೋಕ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net