ಚುಟುಕು ರಚಿಸಲು ಮಾಗಿದ ಅನುಭವ ಅಗತ್ಯ : ರಾಧಾಕೃಷ್ಣ ಉಳಿಯತ್ತಡ್ಕ ಅಭಿಪ್ರಾಯ

New Project (17)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಭಾವಕೇಂದ್ರಿತ ವೈಚಾರಿಕತೆ ಚುಟುಕು ಸಾಹಿತ್ಯದಲ್ಲಿ ಅಡಕವಾಗಿದ್ದು, ಉತ್ತಮ ಚುಟುಕು ರಚಿಸಲು ಮಾಗಿದ ಅನುಭವ ಅಗತ್ಯ ಎಂದು ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ತಿಳಿಸಿದ್ದಾರೆ.

ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ 5ನೇ ಅಂತಾರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನ ‘ಚುಟುಕು ಸಾಹಿತ್ಯ ಸಿರಿ’ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಭಾಷೆ ನಿರ್ನಾಮಗೊಂಡಲ್ಲಿ ಒಂದು ಸಂಸ್ಕೃತಿ ನಾಶಗೊಳ್ಳಲು ಸಾಧ್ಯ. ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು ಕ್ರಮೇಣ ಚಿವುಟಿ ಹಾಕುವ ಹುನ್ನಾರ ಸರ್ಕಾರದ ಕಡೆಯಿಂದ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟದ ಅನಿವಾರ್ಯ. ಮಂಜೇಶ್ವರ ಗೋವಿಂದ ಪೈ, ನಾಡೋಜ ಕಯ್ಯಾರ ಕಿಞಣ್ಣ ರೈ ಮೊದಲಾದ ಕಾಸರಗೋಡಿನ ಮೇರು ಸಾಹಿತಿಗಳಿಂದ ಇಲ್ಲಿನ ಸಾಹಿತ್ಯ ಉನ್ನತಿಗೇರಲು ಸಾಧ್ಯವಾಗಿದೆ ಎಂದರು.

ಉಡುಪಿಯ ಜೋತಿಷ್ಯ ಪಂಡಿತ ವಿದ್ವಾನ್ ರುಪತಿ ಭಟ್, ಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ವೆಂಕಟ ಭಟ್ ಎಡನೀರು, ಡಾ.ವಾಣಿಶ್ರೀ ಕಾಸರಗೋಡು ಉಪಸ್ಥಿತರಿದ್ದರು.

ಜಯಲಕ್ಷ್ಮೀ ಅರುಗೋಳ್ ಸ್ವಾಗತಿಸಿದರು. ಡಾ.ಗಂಗಯ್ಯ ಕುಲಕರ್ಣಿ ನಿರೂಪಿಸಿದರು. ರೇಖಾ ಸುಧೇಶ್ ಮಂಗಳೂರು ವಂದಿಸಿದರು.

ವಿಚಾರಗೋಷ್ಠಿ, ಕವಿಗೋಷ್ಠಿ

ಶಿರಸಿಯ ಯಕ್ಷಗಾನ ತಜ್ಞ ಗಣಪತಿ ಭಟ್ಟ ವರ್ಗಾಸರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಸಮಾರೋಪ, ಡಾ.ಸುರೇಶ ನೆಗಲಗುಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಕವಿಗಳಿಂದ ಕವನ ವಾಚನ, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಸಂಟನೆಯ ಡಾ.ವಾಣಿಶ್ರೀ ಹಾಗೂ ತಂಡದಿಂದ ನೃತ್ಯ ಸಂಗೀತ ವೈಭವ, ವಾದಿರಾಜ ಕಲ್ಲೂರಾಯ ನೇತೃತ್ವದಲ್ಲಿ ಹರಿಸರ್ವೋತ್ತಮ ಯಕ್ಷ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ

ಚುಟುಕು ಸಾಹಿತ್ಯ ಪುಸ್ತಕವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಬಿಡುಗಡೆಗೊಳಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ವಿ.ಬಿ.ಕುಳಮರ್ವ ಅವರಿಗೆ ‘ಚುಟುಕು ಚಿನ್ಮಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಏಕಪಾತ್ರಾಭಿನಯ ನಡೆಸಿಕೊಟ್ಟ ಹುಬ್ಬಳ್ಳಿಯ ಬಾಲಪ್ರತಿಭೆ ಅವನೀಶ ನೀಲಗುಂದ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net