ಪಡುಬಿದ್ರಿ: ಕೃಷಿ ನಿರ್ಲಕ್ಷಿಸುತ್ತ ಬರುತ್ತಿದ್ದೇವೆ. ದೇಶದಲ್ಲಿ ಶೇ.90ರಷ್ಟಿದ್ದ ಕೃಷಿ ಶೇ.65ಕ್ಕಿಳಿದಿದೆ. ಸಹಕಾರಿ ಸಂಘ ಕೃಷಿಕರಿಗೆ ಆಧುನಿಕ ಯಂತ್ರೋಪಕರಣ ಹಾಗೂ ಸವಲತ್ತು ಒದಗಿಸುವಲ್ಲಿ ಸಹಕರಿಸಬೇಕು. ಪ್ರಸ್ತುತ ರಾಜ್ಯ ಸರ್ಕಾರ ಸಮಗ್ರ ಕೃಷಿ ನೀತಿ ಜಾರಿಗೆ ಮುಂದಾಗಿರುವುದು ಸಂತಸ ಎಂದು ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್.ಶೆಟ್ಟಿ ಎಂದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘ ಆಶ್ರಯದಲ್ಲಿ ಕಾಪು ಶ್ರೀ ವೀರಭದ್ರ ದೇವಸ್ಥಾನ ಸಭಾಂಗಣದಲ್ಲಿ ಗುರುವಾರ ವೈಜ್ಞಾನಿಕ ತೆಂಗು ಬೇಸಾಯ ಮತ್ತು ಮಲ್ಲಿಗೆ ಕೃಷಿ, ಭತ್ತದ ಬೆಳೆಯಲ್ಲಿ ಲಾಭಾದಾಯಕ ಕ್ರಮ ಹಾಗೂ ಹೈನುಗಾರಿಕೆ ಬಗ್ಗೆ ಸಮಗ್ರ ಮಾಹಿತಿ ಕಾರ್ಯಕ್ರಮ ಮತ್ತು ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದ.ಕ. ಹಾಲು ಒಕ್ಕೂಟ ವ್ಯವಸ್ಥಾಪಕ ಡಾ.ಮಾಧವ ಐತಾಳ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಲ್.ಹೇಮಂತ್‌ಕುಮಾರ್, ಕಾಪು ಸಹಕಾರಿ ವ್ಯವಸಾಯಿಕ ಸಂಘ ಉಪಾಧ್ಯಕ್ಷ ದಿನೇಶ್ ಎ.ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಎಂ.ಶೆಟ್ಟಿ, ಎಸ್‌ಡಿಸಿಸಿ ವಲಯ ಮೇಲ್ವಿಚಾರಕ ಬಾಲಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು. ಕಾಪು ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿದರು. ನಿರ್ಮಲಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಕೃಷಿಕ ಪ್ರಶಸ್ತಿ ಪ್ರದಾನ
ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಶರ್ಮ ಮತ್ತು ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಅವರು ವೈಜ್ಞಾನಿಕ ತೆಂಗು ಬೇಸಾಯ ಹಾಗೂ ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಮನೋಹರ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಗುರುರಾಜ ಭಟ್ ಉಳಿಯಾರು, ನಿತ್ಯಾನಂದ ನಾಯಕ್ ಪಾಲಮೆ, ಐತಪ್ಪ ಎಸ್.ಕೋಟ್ಯಾನ್, ಯೋಗೀಶ್ ಪೂಜಾರಿ, ಕೃಷ್ಣ ಸೇರಿಗಾರ, ಜಗದೀಶ ದೇವಾಡಿಗ ಅವರಿಗೆ ಅತ್ಯತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.