

ಬದಿಯಡ್ಕ: ಉಪನೀತನಾದ ವಟುವು ಸಂಸ್ಕಾರವಂತನಾಗಿ ಬಾಳಲು ವೇದಾಧ್ಯಯನ ಅತೀ ಅಗತ್ಯ ಎಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ನಾರಾಯಣ ಭಟ್ ಪಂಜಿತ್ತಡ್ಕ ಹೇಳಿದರು.
ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಪಾಠ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸನಾತನ ಭಾರತೀಯ ಸಂಸ್ಕೃತಿಗೆ ಚ್ಯುತಿ ಬಾರದಂತೆ ಮುಂದುವರಿಯಬೇಕಾದರೆ ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಬ್ರಾಹ್ಮಣರ ಶ್ರೇಷ್ಠ ಸಂಸ್ಕಾರವನ್ನು ಜಗತ್ತೇ ಕೊಂಡಾಡುತ್ತಿದೆ. ನಮ್ಮತನವನ್ನು ಉಳಿಸಿಕೊಂಡು ಬಾಳಿ ಬದುಕಬೇಕು. ಅದೇ ರೀತಿ ವೇದಪಾಠ ಶಾಲೆಯನ್ನು ನಿರಂತರವಾಗಿ ಮುಂದುವರಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಹಿರಿಯರಾದ ಶಂಕರ ಭಟ್ ಕಾವೇರಿಕಾನ ಮಂಗಳವಾರ ಉದ್ಘಾಟಿಸಿದರು. ಏಪ್ರಿಲ್, ಮೇ ಎರಡು ತಿಂಗಳುಗಳ ಕಾಲ ವೇದಪಾಠ ಶಾಲೆ ನಡೆಯಲಿದೆ. ಹಿರಿಯ ವಕೀಲ ಶ್ರೀಕೃಷ್ಣ ಭಟ್ ವಾಶೆಮನೆ, ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ಗೋವಿಂದ ಭಟ್ ಏತಡ್ಕ ವಾತನಾಡಿದರು. ವೇದಶಿಬಿರದ ಗುರುಗಳಾದ ಮಹಾಗಣಪತಿ ಅಳಕ್ಕೆ, ಮುರಳೀಕೃಷ್ಣ ಅಳಕ್ಕೆ ಉಪಸ್ಥಿತರಿದ್ದರು. ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಸ್ವಾಗತಿಸಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು.