ಜೀವರಕ್ಷಕ ವಾಹನಕ್ಕೆ ಜೀವಬಂದಿಲ್ಲ! : ಆಲಂಕಾರು ಸರ್ವೀಸ್‌ಗೆ ತೆರಳಿದ್ದ 108 ಆಂಬುಲೆನ್ಸ್ : ಕೇಳುವವರಿಲ್ಲ ಸಾರ್ವಜನಿಕರ ಗೋಳು

New Project (5)
Published on

ಪ್ರವೀಣ್‌ರಾಜ್ ಕಡಬ

ಬಡವರಿಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಬಡವರ ಸಂಜೀವಿನಿಯಾಗಿದ್ದ ಆಲಂಕಾರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಂತು ಜನರಿಗೆ ಸೇವೆ ನೀಡುತ್ತಿದ್ದ 108 ಆಂಬುಲೆನ್ಸ್, ಸರ್ವೀಸ್‌ಗೆಂದು ಕೊಂಡೊಯ್ದು ಒಂದು ತಿಂಗಳಾದರೂ ಇನ್ನೂ ವಾಪಸ್ಸಾಗಿಲ್ಲ.

ಕಳೆದ ತಿಂಗಳು ಸರ್ವೀಸ್‌ಗೆಂದು ಕೊಂಡೊಯ್ದು 15 ದಿನ ಕಳೆದ ಬಳಿಕ ನಾಲ್ಕು ಹೊಸ ಟಯರ್ ಮಾತ್ರ ಅಳವಡಿಸಿ ಕಳುಹಿಸಲಾಗಿತ್ತು. ಬಳಿಕ ಒಂದು ವಾರ ಸೇವೆ ನೀಡಿ, ಮತ್ತೆ ಸರ್ವೀಸ್‌ಗೆಂದು ಕೊಂಡೊಯ್ಯಲಾಗಿದೆ. ಆದರೆ ತಿಂಗಳು ಕಳೆದರೂ ವಾಪಸಾಗಿಲ್ಲ.

10 ವರ್ಷಗಳ ಹಿಂದೆ ಅಂದಿನ ಆರೋಗ್ಯ ಸಚಿವ ಯು.ಟಿ.ಖಾದರ್ ವಿಶೇಷ ಮುತುವರ್ಜಿಯಿಂದ ಆಲಂಕಾರು ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ್ದರು. ಆರಂಭದಲ್ಲಿ ಹಳೆಯ ವಾಹನ ನೀಡಲಾಗಿತ್ತು. ಬಳಿಕ ಹೊಸ ವಾಹನ ನೀಡಲಾಗಿತ್ತು. ಈ ವಾಹನವನ್ನು ಕಳೆದ ಜನವರಿಯಲ್ಲಿ ಟಯರ್ ಬದಲಾವಣೆ ಮತ್ತು ಸರ್ವೀಸ್‌ಗೆಂದು ಕೊಂಡೊಯ್ಯಲಾಗಿತ್ತು. ಅದಾದ ಬಳಿಕ ಹದಿನೈದು ದಿನ ಕಳೆದರೂ ವಾಪಸಾಗದಿದ್ದಾಗ ಮಾಧ್ಯಮದಲ್ಲಿ ವರದಿ ಬಿತ್ತರಗೊಂಡ ಬಳಿಕ ಎಚ್ಚೆತ್ತ ಸಂಬಂದಪಟ್ಟವರು ನಾಲ್ಕು ಟಯರ್ ಮಾತ್ರ ಬದಲಾವಣೆ ಮಾಡಿ ವಾಹನವನ್ನು ವಾಪಸ್ ಮಾಡಿದ್ದರು. ಇದಾಗಿ ವಾರದ ಬಳಿಕ ಮತ್ತೆ ಸರ್ವೀಸ್‌ಗೆಂದು ಕೊಂಡೊಯ್ದು ತಿಂಗಳಾದರೂ ಇನ್ನೂ ವಾಪಸ್ ಮಾಡಿಲ್ಲ.

ರೋಗಿಗಳು ಪರದಾಟ

ಈಗ ಅಗತ್ಯ ಸಂದರ್ಭಗಳಲ್ಲಿ ಕಡಬ, ಸುಬ್ರಹ್ಮಣ್ಯ, ಉಪ್ಪಿನಂಗಡಿ ಪ್ರದೇಶದ ವಾಹನವನ್ನು ಅವಲಂಬಿಸಬೇಕಾಗಿದೆ. ಅದೂ ಸಮಯಕ್ಕೆ ಸರಿಯಾಗಿ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಈಗಾಗಲೇ ಆಲಂಕಾರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯನ್ನು ಸುಬ್ರಹ್ಮಣ್ಯಕ್ಕೆ ನಿಯೋಜಿಸಲಾಗಿದೆ. ತಿಂಗಳಿನಿಂದ ಈ ಭಾಗದಲ್ಲಿ ತುರ್ತು ಸೇವೆಗೆ ಸಾರ್ವಜನಿಕರು ಖಾಸಗಿ ವಾಹನ ಬಳಕೆ ಮಾಡುತ್ತಿದ್ದಾರೆ. ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

108 ಆಂಬುಲೆನ್ಸನ್ನು ಸರ್ವೀಸ್‌ಗೆಂದು ತೆಗದುಕೊಂಡು ಹೋಗಿ ತಿಂಗಳಾದರೂ ವಾಪಸ್ ನೀಡಿಲ್ಲ, ಬದಲಿ ವ್ಯವಸ್ಥೆಯೂ ನೀಡಿಲ್ಲ. ಇದು ಸಂಬಂಧಪಟ್ಟವರ ಬೇಜವಾಬ್ದಾರಿಯಾಗಿದೆ. ಒಂದು ತಿಂಗಳಿನಿಂದ ಈ ಭಾಗದಲ್ಲಿ ನಡೆಯುತ್ತಿರುವ ಅಪಘಾತ, ತುರ್ತು ಸಂದರ್ಭಗಳಲ್ಲಿ ಜನರು ಖಾಸಗಿ ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದೆಷ್ಟೋ ಸಂದರ್ಭದಲ್ಲಿ ತುರ್ತು ಸೇವೆ ಸಿಗದೆ ತೊಂದರೆಗೊಳಗಾಗಿದ್ದಾರೆ. ತಕ್ಷಣ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು. ಫಯಾಝ್ ಸಿ.ಎಂ., ಪೆರಾಬೆ ಗ್ರಾಪಂ ಸದಸ್ಯ ಆಲಂಕಾರಿನಲ್ಲಿ ಸೇವೆ ನೀಡುತ್ತಿದ್ದ 108 ಆಂಬುಲೆನ್ಸನ್ನು ಸರ್ವೀಸ್‌ಗೆ ಕೊಂಡೊಯ್ದಿರುವುದು ಗಮನಕ್ಕೆ ಬಂದಿದೆ. ಆಂಬುಲೆನ್ಸ್ ಸೇವೆಗಳನ್ನು ಮುಂದಿನ ದಿನಗಳಲ್ಲಿ ಖಾಸಗಿಯವರ ಬದಲಾಗಿ ಆರೋಗ್ಯ ಇಲಾಖೆ ಮುನ್ನಡೆಸುವ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ತಕ್ಷಣ ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಡಾ.ತಿಮ್ಮಯ್ಯ, ದ.ಕ. ಜಿಲ್ಲಾ ಆರೊಗ್ಯಾಧಿಕಾರಿ https://www.vijayavani.net/nss-camp-inauguration https://www.vijayavani.net/karate-belt-promotion-test

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net