

ಗಂಗಾಧರ ಕಲ್ಲಪಳ್ಳಿ ಸುಳ್ಯ
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲದ ಅಬ್ಬರ ಆರಂಭವಾಗಲಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಮಳೆಗಾಲಕ್ಕೆ ಸಿದ್ಧತೆಗಳು ಇನ್ನೂ ಅಪೂರ್ಣವಾಗಿಯೇ ಇದೆ. ಸುಳ್ಯದಲ್ಲಿ ಬೇಸಿಗೆಯಲ್ಲಿ ಮಳೆ ಚೆನ್ನಾಗಿ ಸುರಿದ ಕಾರಣ ಕುಡಿಯುವ ನೀರಿಗೆ ಅಷ್ಟೇನೂ ಆಹಾಕಾರ ಇಲ್ಲ. ಆದರೆ ಮಳೆಗಾಲಕ್ಕೆ ಚರಂಡಿ, ರಸ್ತೆ ದುರಸ್ತಿ ಕಾರ್ಯಗಳು ಇನ್ನಷ್ಟೇ ಆಗಬೇಕಾಗಿದೆ. ಮಳೆ ಬಂದರೆ ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೊಳೆಯಂತಾಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಹಲವು ರಸ್ತೆಗಳಲ್ಲಿಯೇ ನೀರು ತುಂಬಿಕೊಳ್ಳುತ್ತದೆ. ಮಲೆನಾಡಾದ ಸುಳ್ಯ ತಾಲೂಕಿನಲ್ಲಿ ಅಲ್ಲಲ್ಲಿ ಗುಡ್ಡ ಜರಿಯುವ, ನೆರೆ ನೀರು ನುಗ್ಗುವ ಸಾಧ್ಯತೆಗಳು ಇದ್ದೇ ಇದೆ. ಈ ಬಗ್ಗೆಯೂ ಎಚ್ಚರಿಕೆ ಅಗತ್ಯ.
ಸುಳ್ಯ ನಗರದಲ್ಲಿ ಅನುಷ್ಠಾನ ಆಗುತ್ತಿರುವ ಅಮೃತ್ 2 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುವ ಕಾರಣ ಅಲ್ಲಲ್ಲಿ ರಸ್ತೆ ಬದಿ, ರಸ್ತೆ ಕಡಿದು ಹಾಕಿ ಪೈಪ್ ಅಳವಡಿಕೆ ಮಾಡುವ ಕಾಮಗಾರಿ ನಡೆಸಲಾಗಿದೆ. ರಸ್ತೆ ಬದಿಯ ಚರಂಡಿ, ಕಡಿದು ಹಾಕಿದ ರಸ್ತೆ, ಕಾಂಕ್ರೀಟ್, ಇಂಟರ್‌ಲಾಕ್‌ಗಳು ಇನ್ನೂ ಪೂರ್ವ ಸ್ಥಿತಿಗೆ ಬಂದಿಲ್ಲ. ಇದು ಸರಿಪಡಿಸದಿದ್ದಲ್ಲಿ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ರಸ್ತೆ ಬದಿ ಹೂತು ಹೋಗಿ ರಸ್ತೆಗಳು, ರಸ್ತೆ ಬದಿ ಕೆಸರುಮಯವಾಗಿ ಸಂಚಾರ ದುಸ್ತರವಾಗುವ ಅಪಾಯ ಇದೆ. ಸುಳ್ಯ ನಗರದ ಬಹುತೇಕ ರಸ್ತೆ ಬದಿ ಈ ರೀತಿ ಅಗೆಯಲಾಗಿದೆ. ಕೆಲವೆಡೆ ರಸ್ತೆ ಮಧ್ಯೆಯೂ ಕಡಿದು ಹಾಕಿ ಪೈಪ್ ಅಳವಡಿಸಲಾಗಿದೆ. ಈ ಕುರಿತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳ ಸಭೆಯನ್ನು ನಗರ ಪಂಚಾಯಿತಿನಲ್ಲಿ ನಡೆಸಲಾಗಿದೆ. ಅಗೆದು ಹಾಕಿದ ರಸ್ತೆಯ ಡಾಮರು, ಕಾಂಕ್ರೀಟ್, ಇಂಟರ್‌ಲಾಕ್‌ಗಳನ್ನು ಪೂರ್ವ ಸ್ಥಿತಿಗೆ ತರುವುದಾಗಿ ಇಂಜಿನಿಯರ್‌ಗಳು ಭರವಸೆ ನೀಡಿದ್ದಾರೆ ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ತಿಳಿಸಿದ್ದಾರೆ.
ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸುಳ್ಯ ನಗರದಲ್ಲಿ ರಸ್ತೆ ಬದಿಯ ಚರಂಡಿ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಪಟ್ಟಣ ಪಂಚಾಯಿತಿಯ ಪ್ರತಿ ವಾರ್ಡ್‌ಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಲಾಗುವುದು. ಸುಧಾಕರ್ ನಗರ ಪಂಚಾಯಿತಿ ಮುಖ್ಯಾಧಿಕಾರಿ ಇನ್ನು ತಾಲೂಕು ಹಂತದಲ್ಲಿಯೂ ಮಳೆಗಾಲ ಎದುರಿಸಲು ಸಿದ್ಧತೆ ಆರಂಭವಾಗಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿ ನೀಡಲಾಗಿದೆ. ಶಾಲೆಗಳ ಹತ್ತಿರ ಇರುವ ಅಪಾಯಕಾರಿ ಮರ, ವಿದ್ಯುತ್ ಕಂಬಗಳನ್ನು ಗುರುತಿಸಿ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚನೆ ನೀಡಲಾಗಿದೆ. ಇದನ್ನು ತೆರವು ಮಾಡಲು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಶಿಥಿಲ ಕಟ್ಟಡಗಳು ಇದ್ದಲ್ಲಿ ಅದರ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಗುಡ್ಡ ಜರಿಯುವ ಸ್ಥಳಗಳ ಬಗ್ಗೆ, ಪ್ರಳಯ ಸಾಧ್ಯತಾ ಸ್ಥಳಗಳ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ರಾಜಣ್ಣ ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ
ಅಂತಿಮ ರೂಪುರೇಷೆ
ಮಳೆಗಾಲದಲ್ಲಿ ತಾಲೂಕುಮಟ್ಟದ ವಿಪತ್ತು ನಿವರ್ಹಣಾ ತಂಡ ರಚನೆ ಮಾಡಲಾಗುವುದು. ಗ್ರಾಮ ಮಟ್ಟದಲ್ಲಿಯೂ ವಿಪತ್ತು ನಿರ್ವಹಣಾ ತಂಡ ರಚಿಸಲಾಗುವುದು. ತಾಲೂಕಿನ ಎಲ್ಲ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸಿ ಸಿದ್ಧತೆಗೆ ಅಂತಿಮ ರೂಪುರೇಷೆ ನೀಡಲಾಗುವುದು. ಗ್ರಾಮ ಮಟ್ಟದಲ್ಲಿಯೂ ಚರಂಡಿ, ರಸ್ತೆ ದುರಸ್ತಿ ಕಾರ್ಯ ನಡೆಸಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚರಂಡಿಗಳ ದುರಸ್ತಿ ಅತೀ ಅಗತ್ಯ
ಸುಳ್ಯ ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಗುಡ್ಡ ಜರಿಯುವ, ನೀರು ನುಗ್ಗುವ ಅಪಾಯ ಇದೆ. ಇಂತಹಾ ಸ್ಥಳಗಳನ್ನು ಗುರುತಿಸಿ ಅಗತ್ಯ ಮುಂಜಾಗೃತಾ ಕ್ರಮ ವಹಿಸಬೇಕು. ಜತೆಗೆ ರಸ್ತೆ, ಚರಂಡಿಗಳನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು ಅತೀ ಅಗತ್ಯ ಎನ್ನುತ್ತಾರೆ ಸಾರ್ವಜನಿಕರು.