ಉತ್ತರ ಪ್ರದೇಶದಲ್ಲಿ ಭಾರಿ ಮಳೆ: 17ಮಂದಿ ಮೃತ್ಯು- 3,056 ಮನೆಗಳಿಗೆ ಹಾನಿ

rain
Published on

ಲಖನೌ: ಉತ್ತರ ಪ್ರದೇಶದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದುವರೆಗೆ 17 ಮಂದಿ ಮೃತಪಟ್ಟಿದ್ದು, ಮಳೆ ಮತ್ತು ಪ್ರವಾಹದಿಂದಾಗಿ 3,056 ಮನೆಗಳಿಗೆ ಹಾನಿಯಾಗಿದೆ. ನಿರಾಶ್ರಿತರಿಗೆ ಸರ್ಕಾರ ನೆರವು ಘೋಷಿಸಿದೆ.

ಆ ರಾಜ್ಯದ 11 ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಗೆ ತತ್ತರಿಸಿರುವ ಜನರನ್ನು ರಕ್ಷಿಸಲು 24 ಗಂಟೆಗಳ ಮೇಲ್ವಿಚಾರಣೆಗಾಗಿ ಅಧಿಕಾರಿಗಳು, ಫ್ಲಡ್ ಪಿಎಸಿ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಇನ್ನು ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 51 ರಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ರಾಜ್ಯದಲ್ಲಿ ಸರಾಸರಿ 28.6 ಮಿ.ಮೀ ಮಳೆ ದಾಖಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ಹತ್ರಾಸ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 185.1 ಮಿಮೀ ಮಳೆ ದಾಖಲಾಗಿದೆ.

ಇದರ ನಡುವೆ ಮೀರತ್‌ನ ಜಾಕಿರ್ ಕಾಲನಿ ಪ್ರದೇಶದಲ್ಲಿ ಅಲ್ಲಾವುದ್ದೀನ್ ಎಂಬಾತನಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಕುಸಿದು 10 ಜನರು ಮೃತಪಟ್ಟಿದ್ದಾರೆ. ಶನಿವಾರ ಸಂಜೆ ನಡೆದ ಈ ಘಟನೆಯಲ್ಲಿ ಇನ್ನೂ ಆರು ಮಂದಿ ಅವಶೇಷಗಳಡಿ ಸಿಲುಕಿದ್ದು, ಗಾಯಗೊಂಡಿರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದವರಿಗೆ ಸರ್ಕಾರ ನೆರವು ನೀಡಲಿದೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net