

Two Wives : ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ.
ನಮ್ಮ ದೇಶದಲ್ಲಿ ವಿಶೇಷ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾದ ಅನೇಕ ಹಳ್ಳಿಗಳಿವೆ. ಆದರೆ ಈ ಒಂದು ಹಳ್ಳಿಯ ಸಂಪ್ರದಾಯ ಮಾತ್ರ ತುಂಬಾ ವಿಚಿತ್ರವಾಗಿದೆ. ಅಷ್ಟೇ ಅಲ್ಲ ಆಘಾತಕಾರಿಯೂ ಹೌದು. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಈ ಒಂದು ಹಳ್ಳಿಯಲ್ಲಿ, ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನೆ. ಆ ಗ್ರಾಮದ ಹೆಸರೇ ರಾಮ್‌ದೇಯೋ-ಕಿ-ಬಸ್ತಿ. ಇದೊಂದು ಪುಟ್ಟ ಹಳ್ಳಿ. 2011ರ ಜನಗಣತಿಯ ಪ್ರಕಾರ, ಈ ಹಳ್ಳಿಯ ಜನಸಂಖ್ಯೆ 946 ಆಗಿತ್ತು. ಇಲ್ಲಿ ಪ್ರತಿಯೊಬ್ಬ ಪುರುಷನಿಗೆ ಇಬ್ಬರು ಹೆಂಡತಿಯರಿದ್ದಾರೆ. ಕೇಳಲು ವಿಚಿತ್ರ ಎನಿಸಿದರೂ ಇದೇ ಸತ್ಯ.
ರಾಮ್‌ದೇಯೋ-ಕಿ-ಬಸ್ತಿ ಗ್ರಾಮದಲ್ಲಿ ಪ್ರತಿ ಪುರುಷನು ಎರಡನೇ ಮದುವೆ ಆಗಲು ಕಾರಣ ಏನೆಂದು ಹುಡುಕಿದಾಗ ದಶಕಗಳಿಂದ ನಡೆಯುತ್ತಿರುವ ವಿಭಿನ್ನ ರೀತಿಯ ಸಂಪ್ರದಾಯ ಎದುರಾಗುತ್ತದೆ. ಈ ಪದ್ಧತಿಗೂ ಮಗುವಿನ ಜನನಕ್ಕೂ ನೇರ ಸಂಬಂಧವನ್ನು ಹೊಂದಿದೆ.
ರಾಮ್‌ದಿಯೋ ಕಿ ಬಸ್ತಿ ಗ್ರಾಮದಲ್ಲಿನ ಯಾವುದೇ ಪುರುಷನ ಮೊದಲ ಹೆಂಡತಿ ಎಂದಿಗೂ ಗರ್ಭಿಣಿಯಾಗುವುದಿಲ್ಲ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಅಲ್ಲದೆ, ಒಂದು ವೇಳೆ ಮೊದಲ ಪತ್ನಿ ಗರ್ಭಧರಿಸುವಲ್ಲಿ ಯಶಸ್ವಿಯಾದರೂ, ಆಕೆ ಗಂಡು ಮಗುವಿಗೆ ಬದಲು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಇದರಿಂದಾಗಿ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ. ಹೀಗಾಗಿ ಇಲ್ಲಿನ ಪುರುಷರು ತಮ್ಮ ಮನೆಯಲ್ಲಿ ಗಂಡು ಮಗು ಜನಿಸಬೇಕೆಂದು ಎರಡು ಬಾರಿ ಮದುವೆಯಾಗುತ್ತಾರೆ.
ಇಲ್ಲಿ ಇನ್ನೊಂದು ನಂಬಿಕೆ ಕೂಡ ಇದೆ. ಅದೇನೆಂದರೆ, ಎರಡನೇ ಹೆಂಡತಿಗೆ ಜನಿಸುವ ಮಗು ಗಂಡು ಮಗುವಾಗುತ್ತದೆಯಂತೆ. ಆದ್ದರಿಂದ ಎರಡು ಬಾರಿ ಮದುವೆಯಾಗುವ ಸಂಪ್ರದಾಯ ಇನ್ನೂ ಪ್ರಚಲಿತದಲ್ಲಿದೆ. ಆದಾಗ್ಯೂ, ಪ್ರಸ್ತುತ ವಿದ್ಯಾವಂತ ಪೀಳಿಗೆಯು ಈ ಪದ್ಧತಿಯನ್ನು ಸಂಪೂರ್ಣವಾಗಿ ಸರಿ ಎಂದು ಪರಿಗಣಿಸಿಲ್ಲ. ಅಲ್ಲದೆ, ಅದನ್ನು ಅನುಸರಿಸುತ್ತಿಲ್ಲ. ಹೀಗಾಗಿ ಗ್ರಾಮದಲ್ಲೀಗ ಬದಲಾವಣೆ ಗಾಳಿ ಬೀಸುತ್ತಿದೆ. ಈ ಸಂಪ್ರದಾಯವನ್ನು ಅನೇಕ ಮಂದಿ ವಿರೋಧಿಸುತ್ತಿದ್ದಾರೆ. ಆದರೆ, ಕೆಲವರು ಮಾತ್ರ ಇನ್ನೂ ಹಳೆಯ ಸಂಪ್ರದಾಯವನ್ನೇ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಈ ಸಂಪ್ರದಾಯವನ್ನು ಅನುಸರಿಸುತ್ತಿರುವ ಗ್ರಾಮಸ್ಥರು ಹೇಳುವ ಪ್ರಕಾರ, ಮೊದಲ ಹೆಂಡತಿಗೆ ಗರ್ಭಧರಿಸಲು ಸಾಧ್ಯವಾಗದ ಕಾರಣ ಆತನಿಗೆ ಮರುಮದುವೆಯಾಗದೆ ಬೇರೆ ದಾರಿ ಇಲ್ಲವಂತೆ. ಕೆಲವರು ಹೇಳುವಂತೆ ಮೊದಲ ಹೆಂಡತಿಗೆ ಹೆಣ್ಣು ಮಗು ಜನಿಸಿತು ಮತ್ತು ಗಂಡು ಮಗು ಪಡೆಯುವ ಆಸೆಯಿಂದ ಮತ್ತೆ ಮದುವೆಯಾಗಿದ್ದಾಗಿ ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಈ ಸಂಪ್ರದಾಯವನ್ನು ಏಕೆ ವಿರೋಧಿಸುವುದಿಲ್ಲ ಎಂಬ ಪ್ರಶ್ನೆಗಳು ಕೂಡ ಉದ್ಭವಿಸುತ್ತದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಗ್ರಾಮಸ್ಥರು ಕೊಟ್ಟ ಉತ್ತರವೇನೆಂದರೆ, ಅಲ್ಲಿನ ಗಂಡಸರು ಇಬ್ಬರೂ ಹೆಂಡತಿಯರಿಗೆ ಸಮಾನ ಹಕ್ಕುಗಳನ್ನು ನೀಡುತ್ತಾರಂತೆ. ಅಲ್ಲದೆ, ಅವರನ್ನು ಸಂತೋಷವಾಗಿ ನೋಡಿಕೊಳ್ಳುತ್ತಾರಂತೆ. ಆದ್ದರಿಂದ ಮಹಿಳೆಯರಿಗೆ ಈ ಪದ್ಧತಿಯಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ.
ಇಬ್ಬರು ಹೆಂಡತಿಯರ ಕಾರಣದಿಂದಾಗಿ ಕುಟುಂಬದಲ್ಲಿ ಎಂದಿಗೂ ಯಾವುದೇ ವಿವಾದಗಳು ನಡೆದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಕುಟುಂಬದಲ್ಲಿ ಜನಿಸಿದ ಮಗುವನ್ನು ಇಬ್ಬರೂ ಹೆಂಡತಿಯರು ಸಮಾನವಾಗಿ ನೋಡಿಕೊಳ್ಳುತ್ತಾರೆ. ಇಬ್ಬರೂ ಹೆಂಡತಿಯರು ಸಂತೋಷದಿಂದ ಒಟ್ಟಿಗೆ ವಾಸಿಸುತ್ತಾರೆ. ಆದ್ದರಿಂದ, ಈ ಸಂಪ್ರದಾಯವನ್ನು ಎಂದಿಗೂ ಪ್ರಶ್ನಿಸಲಾಗಿಲ್ಲ. ಆದರೆ, ಈಗ ಹೊಸ ಪೀಳಿಗೆ ಈ ಸಂಪ್ರದಾಯದಿಂದ ದೂರವಿದ್ದಾರೆ. ಆದ್ದರಿಂದ, ಯುವಕರಲ್ಲಿ ಎರಡು ಮದುವೆಗಳ ಪ್ರಕರಣಗಳು ನಗಣ್ಯವಾಗಿದೆ. (ಏಜೆನ್ಸೀಸ್)