IPL ಮೆಗಾ ಹರಾಜು: ಬದಲಾಗಲಿದೆ ಈ 4 ತಂಡಗಳ ನಾಯಕತ್ವ! ರೋಹಿತ್​ ಈ ತಂಡದ ಕ್ಯಾಪ್ಟನ್​ ಆಗಲಿದ್ದಾರೆ?

Rohit Sharma
Published on

ನವದೆಹಲಿ: ಟಿ20 ಕ್ರಿಕೆಟ್ ವಿಶ್ವಕಪ್ ಗೆಲುವಿನ ಗುಂಗಿನಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಸದ್ಯ ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸದ ಮೂಡ್‌ಗೆ ಬರುತ್ತಿದ್ದಾರೆ. ಭಾರತ ತಂಡ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಇದರ ನಡುವೆ ಮುಂಬರುವ ಐಪಿಎಲ್ ಟೂರ್ನಿಯ ಕುರಿತು ಆಗಾಗ ಹೊಸ ಹೊಸ ಅಪ್​​ಡೇಟ್​ಗಳು ಮತ್ತು ವದಂತಿಗಳು ಸಹ ಹರಿದಾಡುತ್ತಿವೆ. ಕ್ರಿಕೆಟ್​ ಮೂಲಗಳ ಪ್ರಕಾರ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ದೊಡ್ಡ ಬದಲಾವಣೆಗಳಾವ ಸಾಧ್ಯತೆ ಇದೆ.

ನಾಲ್ಕು ತಂಡಗಳಲ್ಲಿ ನಾಯಕತ್ವ ಬದಲಾವಣೆ?

ಕ್ರಿಕೆಟ್ ಲೋಕದಲ್ಲಿ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ. ಅದೇನೆಂದರೆ, ಐಪಿಎಲ್​ ಮೆಗಾ ಹರಾಜಿನಲ್ಲಿ ನಾಲ್ಕು ತಂಡಗಳು ಏಕಕಾಲಕ್ಕೆ ನಾಯಕತ್ವವನ್ನು ಬದಲಾಯಿಸಲಿವೆಯಂತೆ. ಯಾವ ತಂಡಗಳು ಎಂಬುದನ್ನು ಅಧಿಕೃತವಾಗಿ ತಿಳಿದುಕೊಳ್ಳಲು ಕಾಯಬೇಕಿದೆ. ಆದರೆ, ವದಂತಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ, ಗುಜರಾತ್ ಟೈಟಾನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೋಗುವ ಸಾಧ್ಯತೆಯಿದೆ. ರೋಹಿತ್ ಯಾವುದೇ ತಂಡಕ್ಕೆ ಹೋದರೆ ಆ ತಂಡದ ನಾಯಕನಾಗಿ ಕಾರ್ಯನಿರ್ವಹಿಸುವುದರಲ್ಲಿ ಅನುಮಾನವೇ ಇಲ್ಲ. ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗುಜರಾತ್​ ತಂಡ ಗೌತಮ್ ಅದಾನಿ ತೆಕ್ಕೆಗೆ?

ಸಿವಿಸಿ ಕ್ಯಾಪಿಟಲ್ಸ್ 2021 ರಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು 5,625 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತು. ತಂಡದ ಮೌಲ್ಯವು 1 ಶತಕೋಟಿ ಡಾಲರ್ ಮತ್ತು 1.5 ಶತಕೋಟಿ ಡಾಲರ್ ನಡುವೆ ಇದೆ. ಆದಾಗ್ಯೂ, ಬಿಸಿಸಿಐ ನಿಗದಿಪಡಿಸಿದ ಷರತ್ತುಗಳ ಪ್ರಕಾರ, ಮುಂದಿನ ವರ್ಷ ಫೆಬ್ರವರಿವರೆಗೆ ಯಾವುದೇ ತಂಡವು ತಮ್ಮ ಷೇರುಗಳನ್ನು ಮಾರಾಟ ಮಾಡುವಂತಿಲ್ಲ. ಸಿವಿಸಿ ಕ್ಯಾಪಿಟಲ್ಸ್ ಪಾಲುದಾರರು ಗಡುವು ಸಮೀಪಿಸುತ್ತಿದ್ದಂತೆ ತಂಡದಲ್ಲಿನ ತಮ್ಮ ಪ್ರಮುಖ ಪಾಲನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಾಧ್ಯಮಗಳು ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಅನ್ನು ಸಂಪರ್ಕಿಸುತ್ತಿರುವುದಾಗಿ ಲೇಖನಗಳನ್ನು ಪ್ರಕಟಿಸಿವೆ. ಸಿಸಿವಿ ಕ್ಯಾಪಿಟಲ್ಸ್ ತನ್ನ ಪ್ರಮುಖ ಷೇರನ್ನು ಮಾರಾಟ ಮಾಡಿ ನಾಮಮಾತ್ರದ ಷೇರನ್ನು ಮಾತ್ರ ಇಟ್ಟುಕೊಳ್ಳಲು ಉದ್ದೇಶಿಸಿದೆ ಎನ್ನಲಾಗಿದೆ. ಅದಾನಿ ಕೂಡ ಗುಜರಾತ್ ತಂಡವನ್ನು ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಗುಜರಾತ್​ ಟೈಟಾನ್ಸ್​ ತಂಡ ತನ್ನ ಮೊದಲ ಸೀಸನ್​ನಲ್ಲಿ ವಿಜೇತರಾದರು. ಎರಡನೇ ಸೀಸನ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

ಲಖನೌ ತಂಡದಿಂದ ರಾಹುಲ್​ ನಿರ್ಗಮನ?

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ತಂಡವನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಬಲವಾಗಿ ಹೇಳಲಾಗುತ್ತಿದೆ. ಕಳೆದ ಋತುವಿನಲ್ಲಿ ಸಂಜೀವ್ ಗೋಯೆಂಕಾ ಅವರು ನಾಯಕ ರಾಹುಲ್ ಅವರನ್ನು ನಿಂದಿಸುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ನಂತರ ಅದನ್ನು ಮರೆಮಾಚಲು ರಾಹುಲ್ ಅವರನ್ನೂ ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಆದರೆ, ಆ ನೋವಿನಿಂದ ರಾಹುಲ್ ಹೊರ ಬಂದಿಲ್ಲ ಎನ್ನುತ್ತಾರೆ. ಹೀಗಾಗಿ ರಾಹುಲ್​ ಲಖನೌ ತಂಡದಿಂದ ಹೊರಬಂದು ಆರ್​ಸಿಬಿಯತ್ತ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನೇ ಹಲವು ತಂಡಗಳು ಕೈಬಿಡುವುದು ಖಚಿತ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್‌ನಿಂದ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯ ಕುಮಾರ್ ಯಾದವ್ ಕೂಡ ಹೊರಬರುತ್ತಾರೆ ಎನ್ನಲಾಗಿದೆ. ರೋಹಿತ್ ಶರ್ಮ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದಾಗ ಬುಮ್ರಾ ಮತ್ತು ಸೂರ್ಯಕುಮಾರ್​ ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳಿವೆ. ಹೀಗಾಗಿ ಇಬ್ಬರು ತಂಡದಿಂದ ಹೊರಬಂದರು ಅಚ್ಚರಿಪಡಬೇಕಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net