

ಆಗ್ರಾ: ಮದುವೆ ಸಮಾರಂಭಗಳಲ್ಲಿ ಯಾವ್ಯಾವುದೋ ಕಾರಣಕ್ಕೆ ಕುಟುಂಬಗಳ ನಡುವೆ ಜಗಳಗಳು ನಡೆಯುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಆದರೆ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ರಸಗುಲ್ಲಾ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ಪ್ರಕರಣ ಉತ್ತರಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಆಗ್ರಾದ ಶಂಸಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ (ನವೆಂಬರ್ 20) ತಡರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ರಸಗುಲ್ಲಾ ಕುರಿತು ಎರಡು ಕಡೆಯವರ ನಡುವೆ ಘರ್ಷಣೆ ಸಂಭವಿಸಿದೆ. ಗಲಾಟೆ ಹೆಚ್ಚಾದಾಗ ಕೋಲುಗಳನ್ನು ಬಳಸಲಾಯಿತು. ಇದರಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಂಸಾಬಾದ್ ಪಟ್ಟಣದ ನಯಾಬನ್ಸ್ ರಸ್ತೆಯಲ್ಲಿರುವ ಸಂತೋಷಿ ಮಾತಾ ದೇವಸ್ಥಾನದ ಬಳಿ ವಿವಾಹ ಸಮಾರಂಭದಲ್ಲಿ ಔತಣಕೂಟ ನಡೆಯುತ್ತಿದ್ದು, ಈ ವೇಳೆ ರಸಗುಲ್ಲಾ ತಿನ್ನುವ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ತಿರುಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಶರ್ಮಾ ತಿಳಿಸಿದ್ದಾರೆ.
ಪೊಲೀಸರು ಎಲ್ಲಾ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎತ್ಮಾದ್‌ಪುರದಲ್ಲಿ ಮದುವೆಯಲ್ಲಿ ಸಿಹಿತಿಂಡಿಗಳ ಕೊರತೆಯ ಬಗ್ಗೆ ಜಗಳವಾಗಿತ್ತು. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದರು.