

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು, ಜುಲೈನಲ್ಲಿ 378 ಪ್ರಕರಣಗಳನ್ನು ಪತ್ತೆಹಚ್ಚಿ 18 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ನಗರದ 8 ವಿಭಾಗ ಮತ್ತು ಸಿಸಿಬಿಯಿಂದ ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ವ್ಯಸನಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಜುಲೈನಲ್ಲಿ 378 ಪ್ರಕರಣಗಳನ್ನು ಪತ್ತೆ ಮಾಡಿ 47 ಅಂತಾರಾಜ್ಯ, 13 ವಿದೇಶಿ ಪ್ರಜೆಗಳನ್ನು ಸೇರಿದಸಂತೆ 474 ಪೆಡ್ಲರ್ಗಳನ್ನು ಬಂಧಿಸಲಾಗಿದೆ ಎಂದರು.
72 ಪ್ರಕರಣಗಳನ್ನು ಡ್ರಗ್ಸ್ ಪೆಡ್ಲರ್ಗಳ ಮೇಲೂ ಮತ್ತು 306 ಪ್ರಕರಣಗಳಲ್ಲಿ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇದಲ್ಲದೆ, ಜುಲೈನಲ್ಲಿ 11 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಪ್ರಕರಣಗಳಲ್ಲಿ 18 ಕೋಟಿ ರೂ. ಮೌಲ್ಯದ 1,785 ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಇದರಲ್ಲಿ 1,723 ಕೆಜಿ ಗಾಂಜಾ, 40 ಗ್ರಾಂ ಹಾಶಿಷ್ ಆಯಿಲ್, 467 ಗ್ರಾಂ ಚರಸ್, ಕೊಕೈನ್, ಎಂಡಿಎಂಎ ಸೇರಿದಂತೆ ವಿವಿಧ ಡ್ರಗ್ಸ್ ಸೇರಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದರು.
ಮತ್ತೊಂದೆಡೆ ಶಿಕ್ಷಣ ಸಂಸ್ಥೆಗಳ ಬಳಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ವಿರುದ್ಧ ಪೊಲೀಸರು, ಕಾರ್ಯಾಚರಣೆ ಮುಂದುವರಿಸಿದ್ದಾರೆ. 21 ಡ್ರಗ್ಸ್ ಮಾರಾಟ ಮತ್ತು 32 ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಪ್ಟ ಕಾಯ್ದೆಯಡಿ ಶಾಲಾ, ಕಾಲೇಜುಗಳ 100 ಮೀಟರ್ ಒಳಗೆ ತಂಬಾಕು ಮಾರಾಟ ಮಾಡುತ್ತಿದ್ದವರ ವಿರುದ್ಧ 24 ಪ್ರಕರಣ ದಾಖಲಿಸಲಾಗಿದೆ. 3588 ಲಘು ಪ್ರಕರಣ ದಾಖಲಿಸಿ 5.99 ಲಕ್ಷ ರೂ. ದಂಡ ಸಂಗ್ರಹಿಸಿರುವುದಾಗಿಕಮಿಷನರ್ ಮಾಹಿತಿ ನೀಡಿದರು.
ಪಾಲಕರು, ಶಿಕ್ಷಕರಿಂದ ಮೆಚ್ಚುಗೆ :
ಜುಲೈನಲ್ಲಿ ಸಹ 118 ಶಾಲಾ ಕಾಲೇಜುಗಳಿಗೆ ಪೊಲೀಸರು ಭೇಟಿ ಕೊಟ್ಟು ಮಾದಕ ದ್ರವ್ಯ ಮಾರಾಟ, ಸಾಗಾಟ ಮತ್ತು ಸೇವನೆ ಕುರಿತು ಜಾಗೃತಿ ಅಭಿಯಾನ ಮುಂದುವರಿಸಿದ್ದಾರೆ. ಇದರಿಂದ ಆಗುವ ದುಷ್ಪರಿಣಾಮ ಬಗ್ಗೆ ಮಾಹಿತಿ ನೀಡಿ ಡ್ರಗ್ಸ್ನಲ್ಲಿ ತೊಡಗಿರುವ ಪೆಡ್ಲರ್ಗಳು ಮತ್ತು ವ್ಯಸನಿಗಳ ಮಾಹಿತಿ ಕೋಡಲಾಗಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಲಭಿಸಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಮತ್ತು ಪಾಲಕರಿಂದ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದರು.