

ನವದೆಹಲಿ: 65 ಸಿಬ್ಬಂದಿ ಕರೊನಾ ಸೋಂಕಿಗೆ ಒಳಗಾಗುವ ಮೂಲಕ ಆತಂಕ ಮೂಡಿಸಿದ್ದ ಹರಿಯಾಣಾದ ಸುಖ್ದೇವ್ ಢಾಬಾದ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಢಾಬಾದ 10 ಜನರು ಸೋಂಕಿಗೆ ಒಳಗಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಈಗ 75ಕ್ಕೆ ಏರಿದಂತಾಗಿದೆ.
ಹರಿಯಾಣಾದ ಸೋನಿಪತ್ ಮುರ್ಥಾಲ್ನಲ್ಲಿರುವ ಈ ಅಮ್ರಿಕ್ ಸುಖ್ದೇವ್ ಢಾಬಾ ಭಾರಿ ಪ್ರಸಿದ್ಧಿ ಹೊಂದಿದೆ. ನಿತ್ಯ ಸಾವಿರಾರು ಜನರು ಊಟೋಪಚಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಸೋಂಕಿನ ಸುದ್ದಿ ಹರಡುತ್ತಿದ್ದಂತೆ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ನೋಡಿದರೆ ಇನ್ನೆಷ್ಟು ಜನರಿಗೆ ಕೋವಿಡ್ ಕಾಣಿಸಿಕೊಂಡಿದೆಯೋ ಎಂಬ ಭೀತಿ ಉಂಟಾಗದೇ ಇರದು.
ಇದೊಂದೇ ಅಲ್ಲ, ದೆಹಲಿ- ಹರಿಯಾಣ ರಾಷ್ಟ್ರೀಯ ಹೆದ್ದಾರಿಗುಂಟ ಇಂಥ ಹಲವು ಢಾಬಾಗಳಿವೆ. ಭಾರಿ ಸಂಖ್ಯೆಯಲ್ಲಿ ಜನರು ಊಟಕ್ಕೆಂದು ಇಲ್ಲಿಗೆ ಬರುತ್ತಾರೆ. ಇಷ್ಟೊಂದು ನಿರ್ಲಕ್ಷ್ಯಕ್ಕೆ ಯಾರು ಕಾರಣ? ಸಿಬ್ಬಂದಿಯೇ, ಅಧಿಕಾರಿಗಳೇ ಅಥವಾ ಗ್ರಾಹಕರೇ ಎಂಬ ಚರ್ಚೆ ಹುಟ್ಟು ಹಾಕಿದೆ.
ಈ ವಿಡಿಯೋಗಳನ್ನು ಸಿಎಂ ಕಚೇರಿ, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಲಾಗಿದೆ. ಮಾತ್ರವಲ್ಲ ಪ್ರಧಾನಿ ಕಚೇರಿಗೂ ಟ್ಯಾಗ್ ಮಾಡಿದ್ದಾರೆ. ವ್ಯಕ್ತಿಗತ ಅಂತರವನ್ನೇ ಕಾಯ್ದುಕೊಳ್ಳದ ಇವರ ಮೇಲೆ ಯಾರೂ ನಿಗಾ ಇಟ್ಟಿಲ್ಲವೇ? ಕೋವಿಡ್ ಮಾರ್ಗಸೂಚಿಗಳನ್ನೇ ಪಾಲಿಸದ ಇಂಥ ಢಾಬಾ ಹಾಗೂ ಹೋಟೆಲ್ಗಳಿಗೆ ಅನುಮತಿ ನೀಡಿದ್ದು ಹೇಗೆ ಎಂದು ಎಂದು ಜನರು ಪ್ರಶ್ನಿಸಿದ್ದಾರೆ. ಮುರ್ಥಾಲ್ ಪ್ರದೇಶ ಊಟೋಪಚಾರಕ್ಕೆ ಭಾರಿ ಖ್ಯಾತವಾಗಿದೆ. ಇಲ್ಲಿನ ಢಾಭಾಗಳಿಗೆ ದೆಹಲಿಯಿಂದಲೇ ಹೆಚ್ಚಿನ ಜನರು ಬರುತ್ತಾರೆ. ಸದ್ಯ ಇವೆರಡೂ ಢಾಬಾಗಳನ್ನು ಬಂದ್ ಮಾಡಲಾಗಿದೆ.