ಮಾನಹಾನಿ ಪ್ರಕರಣ; ಬೇಷರತ್​ ಕ್ಷಮೆಯಾಚಿಸುವಂತೆ ಮರಿಯಮ್​ ನವಾಜ್​ಗೆ ಇಮ್ರಾನ್​ ಖಾನ್​ ಪತ್ನಿಯಿಂದ ನೋಟಿಸ್​!

bibi
Published on

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ಮಾನಹಾನಿ ನಿಂದನೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪಾಕಿಸ್ತಾನ​ ಮುಸ್ಲಿಂ ಒಕ್ಕೂಟದ ಉನ್ನತ ನಾಯಕಿ ಮರಿಯಮ್​ ನವಾಜ್​ ಅವರಿಗೆ ಕಾನೂನು ಮೂಲಕ ಲೀಗಲ್​ ನೋಟಿಸ್​ ನೀಡಿದ್ದಾರೆ.

ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ವಿರುದ್ಧ ಮೇ ತಿಂಗಳಲ್ಲಿ ಲಾಹೋರ್​​ನಲ್ಲಿ ನಡೆದ ಭಾಷಣವೊಂದರಲ್ಲಿ ಆರೋಪಗಳನ್ನು ಮಾಡಿ ಅವಹೇಳನ ಮಾಡಿದ್ದಾರೆ ಎಂದು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್​ಗೆ ಬುಶ್ರಾ ಗುರುವಾರ ನೋಟಿಸ್ ನೀಡಿದರು.

ಮರಿಯಮ್​ ಅವರು ತಮ್ಮ ಭಾಷಣದಲ್ಲಿ ಬುಶ್ರಾ ಅವರು ವಿರುದ್ಧ ಮಾತನಾಡಿ '' ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಉದ್ಯಮಿಯೊಬ್ಬರಿಗೆ ಭೂಮಿಯನ್ನು ಹಸ್ತಾಂತರಿಸುವ ಸಲುವಾಗಿ ಅವರ ಬಳಿಯಿಂದ ಬುಶ್ರಾ 5 ಕ್ಯಾರೆಟ್​​ನ ಚಿನ್ನದ ಉಂಗುರವನ್ನು ಲಂಚವಾಗಿ ಪಡೆದಿದ್ದರು'' ಎಂದು ಹೇಳಿಕೆ ನೀಡಿದ್ದರು.

ಮರಿಯಮ್​ ಅವರ ಹೇಳಿಕೆಯಿಂದ ಬುಶ್ರಾ ಮತ್ತು ಅವರ ಕುಟುಂಬಕ್ಕೆ ಬಹಳ ಮಾನಹಾನಿಯಾಗಿದೆ. ಇದಲ್ಲದೇ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಇಮ್ರಾನ್​ ಖಾಮ್​ ಅವರ ರಾಜಕೀಯ ವಿರೋಧಿಗಳಿಗೆ ಅಸ್ತ್ರವನ್ನು ನೀಡಿದಂತಾಗಿದೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಬುಶ್ರಾ ಅವರು ತಮ್ಮ ಮೇಲಿನ ಆರೋಪಗಳನ್ನು ಹಿಂಪಡೆಯುವಂತೆ ಹಾಗೂ ಕ್ಷಮೆಯಾಚಿಸುವಂತೆ ಮೇರಿಯಮ್ ಅವರನ್ನು ಕೇಳಿಕೊಂಡಿದ್ದಾರೆ. ಒಂದು ವೇಳೆ ಕ್ಷಮೆ ಕೇಳದಿದ್ದರೆ ನ್ಯಾಯಾಲಯವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಈ ಬುಶ್ರಾ ಅವರ ನೋಟಿಸ್‌ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ಮುಖ್ಯ ಸಂಘಟಕ ಟ್ವೀಟ್​ ಮಾಡಿ, "ಸದ್ಯ ಈಗಲಾದರೂ ಬುಶ್ರಾ ಬೀಬಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅಲ್ಲಿಯೇ ಅವರು ಮಾಡಿದ ತಪ್ಪುಗಳು ಹೊರಬರಲಿ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net